
ಮೊದಲ ಇನ್ನಿಂಗ್ಸ್‌ನಲ್ಲಿ ಪಾಂಡೆ, ಸಿದ್ದಾರ್ಥ್ ಭರ್ಜರಿ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ರನ್ ಕಲೆಹಾಕುವಷ್ಟರಲ್ಲಿ ಮೊದಲೆರಡು ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ ಕೇವಲ 16 ರನ್‌ಗೆ ರನೌಟ್ ಆದ್ರೆ, ದೇವದತ್ ಪಡಿಕ್ಕಲ್ 21 ರನ್‌ಗಳಿಸಿ ಯುವರಾಜ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದ್ರು.
ಇದ್ರ ಬೆನ್ನಲ್ಲೇ ಉತ್ತಮವಾಗಿ ಆಡ್ತಿದ್ದ ಆರ್ ಸಮರ್ಥ್ 47 ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಮೊದಲೆರಡು ವಿಕೆಟ್ ಪತನದ ಬಳಿಕ ಕೃಷ್ಣಮೂರ್ತಿ ಸಿದ್ಧಾರ್ಥ್ ಮತ್ತು ನಾಯಕ ಮನೀಷ್ ಪಾಂಡೆ ನಾಲ್ಕನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಮೂಲಕ ಕರ್ನಾಟಕ ತಂಡವನ್ನ ಸುಭದ್ರ ಸ್ಥಿತಿಯತ್ತ ತಲುಪಿಸಿದ್ರು. ದ್ವಿಶತಕದ ಜೊತೆಯಾಟವಾಡಿದ ಈ ಜೋಡಿ ನಾಲ್ಕನೇ ವಿಕೆಟ್‌ಗೆ 267 ರನ್‌ಗಳ ಜೊತೆಯಾಟವಾಡಿತು.
ಮನೀಷ್ ಪಾಂಡೆ ಏಕದಿನ ಪಂದ್ಯದ ರೀತಿಯಲ್ಲಿ ಬ್ಯಾಟ್ ಬೀಸಿ 121 ಎಸೆತಗಳಲ್ಲಿ 12 ಬೌಂಡರಿ ಮತ್ತು 10 ಅಮೋಘ ಸಿಕ್ಸರ್ ನೆರವಿನಿಂದ 156 ರನ್ ಸಿಡಿಸಿದ್ರು. ಇನ್ನು ಪಾಂಡೆ ಜೊತೆಗೆ ಉತ್ತಮ ಆಟವಾಡಿದ ಕೃಷ್ಣಮೂರ್ತಿ ಸಿದ್ಧಾರ್ಥ್ 250 ಎಸೆತಗಳಲ್ಲಿ 146 ರನ್ ಕಲೆಹಾಕಿದ್ರು. ಇವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ, 2 ಸಿಕ್ಸರ್ ಸಿಡಿಸಿದ್ರು.
ಕೆಳಕ್ರಮಾಂಕದಲ್ಲಿ ಕೆ. ಗೌತಮ್ 35 ಎಸೆತಗಳಲ್ಲಿ 52 ರನ್‌ಗಳ ಕೊಡುಗೆ ಮೂಲಕ ಅಂತಿಮವಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್ 481ರನ್‌ಗಳಿಗೆ ಆಲೌಟ್ ಆಯಿತು.

ಉತ್ತಮ ಹೋರಾಟ ಪ್ರದರ್ಶಿಸಿದ ರೈಲ್ವೇಸ್
ಕರ್ನಾಟಕದ ಬೃಹತ್ ಮೊತ್ತಕ್ಕೆ ಉತ್ತರವಾಗಿ ರೈಲ್ವೇಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಓಪನರ್‌ಗಳಿಬ್ಬರು ಅರ್ಧಶತಕ ದಾಖಲಿಸುವ ಮೂಲಕ ಶತಕದ ಜೊತೆಯಾಟವಾಡಿದರು. ಮೃನಾಲ್ ದೇವಧರ್ 56, ವಿವೇಕ್ ಸಿಂಗ್ 59 ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಮೊದಲೆರಡು ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶಿವಂ ಚೌಧರಿ 8ರನ್‌ಗೆ ಔಟಾದರು. ಆದ್ರೆ ನಾಲ್ಕನೇ ವಿಕೆಟ್‌ಗೆ ಜೊತೆಯಾದ ಅನಿರುದ್ಧ ಘೋಶ್ 105, ಮೊಹಮ್ಮದ್ ಸೈಫ್ 84 ರನ್ ಕಲೆಹಾಕುವ ಮೂಲಕ ತಂಡದ ಮೊತ್ತ 400ರ ಗಡಿ ದಾಟುವಲ್ಲಿ ನೆರವಾದ್ರು.
ಅಂತಿಮವಾಗಿ ರೈಲ್ವೇಸ್ ಮೊದಲ ಇನ್ನಿಂಗ್ಸ್ 426 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹಿನ್ನಡೆ ಅನುಭವಿಸಿತು.

223ರನ್‌ಗಳಿಗೆ ಕರ್ನಾಟಕ ಡಿಕ್ಲೇರ್
ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಮತ್ತೆ ಎಡವಿದ ಕರ್ನಾಟಕ ಪರ ದೇವದತ್ ಪಡಿಕ್ಕಲ್ ಕೇವಲ 4ರನ್‌ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಎರಡನೇ ವಿಕೆಟ್‌ಗೆ ಮಯಾಂಕ್ ಅಗರ್ವಾಲ್ ಮತ್ತು ಆರ್. ಸಮರ್ಥ್ ಶತಕದ ಜೊತೆಯಾಟದ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದ್ರು.
ಮಯಾಂಕ್ 56, ಆರ್. ಸಮರ್ಥ್ 83, ಸಿದ್ದಾರ್ಥ್ 39, ಮನೀಶ್ ಪಾಂಡೆ ಅಜೇಯ 24 ರನ್ ಕಲೆಹಾಕಿದ್ರು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳೆಲ್ಲಾ ಬಹುಬೇಗ ವಿಕೆಟ್ ಒಪ್ಪಿಸಿದ ಪರಿಣಾಮ ಕರ್ನಾಟಕ 9 ವಿಕೆಟ್ ನಷ್ಟಕ್ಕೆ 223 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.
ಅಂತಿಮ ದಿನದಾಟದಲ್ಲಿ ರೈಲ್ವೇಸ್ ಗೆಲುವಿಗೆ 278 ರನ್‌ಗಳ ಗುರಿ ನೀಡಿದ ಪರಿಣಾಮ, ರೈಲ್ವೇಸ್ ಅಂತಿಮವಾಗಿ ಅಂತಿಮ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 69 ರನ್‌ಗಳಿಸಷ್ಟೇ ಶಕ್ತವಾಯಿತು. ಪರಿಣಾಮ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಪಂದ್ಯದಲ್ಲಿ ಕರ್ನಾಟಕ ಪರ ಕೆ. ಗೌತಮ್ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಕಾಣಿಸಿಕೊಂಡ್ರೆ, ರೈಲ್ವೇಸ್ ಪರ ಯುವರಾಜ್ ಸಿಂಗ್ 6 ವಿಕೆಟ್, ಅಮಿತ್ ಮಿಶ್ರಾ 5 ವಿಕೆಟ್ ಪಡೆದು ಮಿಂಚಿದ್ದಾರೆ.


Click it and Unblock the Notifications












