
ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡದ ಪರವಾಗಿ ಆಡುತ್ತಿದ್ದಾರೆ. ರಣಜಿ ಕ್ರಿಕೆಟ್ ಟೂರ್ನಿಗೆ ಪದಾರ್ಪಣೆ ಮಾಡಿರುವ ಅರ್ಜುನ್ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅರ್ಜುನ್ ತೆಂಡೂಲ್ಕರ್ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ದಿನದ ಅಂತಿಮ ಹಂತದಲ್ಲಿ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್‌ಗಾಗಿ 7ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದರು. ಎರಡನೇ ದಿನ ಅಗ್ರ ಕ್ರಮಾಂಕದ ಆಟಗಾರ ಸುಯಾಶ್ ಪ್ರಬುದೇಸಾಯಿ ಜೊತೆಗೆ ಅದ್ಭುತ ಜೊತೆಯಾಟವನ್ನು ಆಡಿದ್ದು 200ಕ್ಕೂ ಅಧಿಕ ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಆಟಗಾರರು ಕೂಡ ಭರ್ಜರಿ ಶತಕ ಸಿಡಿಸಿ ಮಿಂಚಿದ್ದು ಗೋವಾ ತಂಡ ಅತ್ಯುತ್ತಮ ಸ್ಥಿತಿಯಲ್ಲಿದೆ.
ಆರಂಭದಿಂದಲೇ ಗಮನಸೆಳೆದ ಅರ್ಜುನ್: ಇನ್ನು ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಆರಂಭದಿಂದಲೇ ಗಮನಸೆಳೆಯುವಲ್ಲಿ ಯಶಸ್ವಿಯಾದರು. ಉತ್ತಮ ಎಸೆತಗಳಿಗೆ ತಕ್ಷಣಾತ್ಮಕವಾಗಿ ಆಡುತ್ತಾ ಕೆಟ್ಟ ಎಸೆತಗಳಿಗೆ ದಂಡಿಸುತ್ತಾ ಸಾಗಿದರು ಅರ್ಜುನ್. ಸಾಕಷ್ಟು ಬೌಂಡರಿಗಳನ್ನು ಕೂಡ ಬಾರಿಸುವ ಮೂಲಕ ತಮ್ಮ ಬ್ಯಾಟಿಂಗ್‌ನ ಕೌಶಲ್ಯವನ್ನು ಕೂಡ ಅರ್ಜುನ್ ತೆಂಡೂಲ್ಕರ್ ಪ್ರದರ್ಶಿಸಿದ್ದಾರೆ. ಮೈದಾನದ ಎಲ್ಲಾ ಭಾಗಕ್ಕೂ ಚೆಂಡನ್ನು ಅಟ್ಟಿದ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
ಅರ್ಜುನ್ ತೆಂಡೂಲ್ಕರ್ 178 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ್ದಾರೆ. ಇದರಲ್ಲಿ 12 ಬೌಂಡರಿ ಹಾಗೂ ಎರಡು ಸಿಕ್ಸರ್ ಕೂಡ ಸೇರಿದೆ. ಈ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಆಗಮನವನ್ನು ಭರ್ಜರಿಯಾಗಿ ಸಾರಿದ್ದಾರೆ. ಗೀವಾ ಈಗಾಗಲೇ 400 ರನ್‌ಗಳ ಗಡಿ ದಾಟಿದ್ದು ರಾಜಸ್ಥಾನ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಿದೆ. ಇನ್ನು ಪ್ರಭುದೇಸಾಯಿ ಭರ್ಜರಿ ದ್ವಿಶತಕದ ಮೇಲೆ ಚಿತ್ತ ನೆಟ್ಟಿದ್ದಾರೆ.
ತಂದೆಯ ಸಾಧನೆ ಪುನರಾವರ್ತಿಸಿದ ಅರ್ಜುನ್: 34 ವರ್ಷಗಳ ಹಂದೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಗಮನಸೆಳೆದಿದ್ದರು. 1988ರ ಡಿಸೆಂಬರ್ 11ರಂದು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸಚಿನ್ ಈ ಸಾಧನೆ ಮಾಡಿದ್ದರು. ಆಗ ಸಚಿನ್ ವಯಸ್ಸು ಕೇವಲ 15 ವರ್ಷ. ಇದೀಗ ಬಹುತೇಕ ಮೂರುವರೆ ದಶಕದ ಬಳಿಕ ಸಚಿನ್ ಪುತ್ರ ಅರ್ಜುನ್ ಅದೇ ಸಾಧನೆ ಮಾಡಿದ್ದಾರೆ.
ಮುಂಬೈ ತೊರೆದು ಗೋವಾ ಸೇರಿದ ಅರ್ಜುನ್: ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ವೃತ್ತಿ ಜೀವನ ಆರಂಭಿಸಿದ ಅರ್ಜುನ್ ತೆಂಡೂಲ್ಕರ್ ಹೆಚ್ಚಿನ ಅವಕಾಶ ಪಡೆಯುವ ದೃಷ್ಟಿಯಿಂದ ಗೋವಾ ಪರವಾಗಿ ಆಡಲು ನಿರ್ಧರಿಸಿ ಗೋವಾ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ಪರವಾಗಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಆಡಿರುವ ಅರ್ಜುನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಐಪಿಎಲ್‌ನಲ್ಲಿ ಈವರೆಗೆ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಪಡೆದುಕೊಂಡಿಲ್ಲ.