Ranji Trophy 2022-23: ಈ ಬಾರಿಯ ಋತುವಿನಿಂದ ಅತ್ಯುತ್ತಮ ಆಡುವ 11ರ ಬಳಗ

ಭಾನುವಾರ, ಫೆಬ್ರವರಿ 19ರಂದು ಮುಕ್ತಾಯಗೊಂಡ 2022-23ರ ರಣಜಿ ಟ್ರೋಫಿ ಪಂದ್ಯಾವಳಿಯ ಫೈನಲ್‌ನಲ್ಲಿ ಬಂಗಾಳವನ್ನು ಸೋಲಿಸುವ ಮೂಲಕ ಸೌರಾಷ್ಟ್ರ ತಂಡ ಮರಳಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಂತಿಮ ಪಂದ್ಯವು ಏಕಪಕ್ಷೀಯ ನಡೆದಿದ್ದು, ನಾಲ್ಕು ದಿನಗಳಲ್ಲಿ ಸೌರಾಷ್ಟ್ರ ಪಂದ್ಯದ ಹಿಡಿತ ಸಾಧಿಸಿ, 9 ವಿಕೆಟ್‌ಗಳ ಜಯ ದಾಖಲಿಸಿತು.
ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿಯು ಡಿಸೆಂಬರ್ 13, 2022ರಂದು ಆರಂಭವಾಗಿತ್ತು. ಭಾರತದ ವಿವಿಧ ರಾಜ್ಯಗಳಿಂದ 38 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು. ಅದರಲ್ಲಿ ಮಧ್ಯಪ್ರದೇಶ, ಪಂಜಾಬ್, ಬಂಗಾಳ, ಸೌರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಆಂಧ್ರಪ್ರದೇಶ ಮತ್ತು ಉತ್ತರಾಖಂಡ ಅಗ್ರ ಎಂಟು ತಂಡಗಳಾಗಿ ಹೊರಹೊಮ್ಮಿದವು.
ಅಂತಿಮವಾಗಿ ಸೌರಾಷ್ಟ್ರ ಮತ್ತು ಬಂಗಾಳ ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು. ನಾಯಕ ಜಯದೇವ್ ಉನದ್ಕತ್ ಅವರ ಅತ್ಯುತ್ತಮ ಪ್ರದರ್ಶನವು ಸೌರಾಷ್ಟ್ರ ತಂಡ ತನ್ನ ಎರಡನೇ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಲು ನೆರವಾಯಿತು. ಇದೀಗ ಎಲ್ಲ ತಂಡಗಳಿಂದ ಅಲೇದು ತೂಗಿ ಆಯ್ಕೆ ಮಾಡಿದ ರಣಜಿ ಟ್ರೋಫಿ 2022-23ರ ಅತ್ಯುತ್ತಮ ಆಡುವ 11ರ ಬಳಗ ಇಲ್ಲಿದೆ.

ಮಯಾಂಕ್ ಅಗರ್ವಾಲ್ - ಹಾರ್ವಿಕ್ ದೇಸಾಯಿ
ರಣಜಿ ಟ್ರೋಫಿ 2022-23ರ ಅತ್ಯುತ್ತಮ ತಂಡದಲ್ಲಿ ಸೌರಾಷ್ಟ್ರದ ವಿಕೆಟ್ ಕೀಪರ್ ಹಾರ್ವಿಕ್ ದೇಸಾಯಿ ಜೊತೆ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರನಾಗಿ ಇನ್ನಿಂಗ್ಸ್ ತೆರೆಯಲಿದ್ದಾರೆ. ಮಯಾಂಕ್ ಅಗರ್ವಾಲ್ 9 ಪಂದ್ಯಗಳಲ್ಲಿ 990 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದರಲ್ಲಿ ಕರ್ನಾಟಕ ತಂಡಕ್ಕಾಗಿ ಮೂರು ಶತಕ ಮತ್ತು ಆರು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇನ್ನು ಸೌರಾಷ್ಟ್ರ ತಂಡದ ಪರ ರನ್ ಗಳಿಸಿದವರಲ್ಲಿ ಹಾರ್ವಿಕ್ ದೇಸಾಯಿ ಮೊದಲಿಗರಾಗಿದ್ದಾರೆ. 10 ಪಂದ್ಯಗಳಲ್ಲಿ 614 ರನ್‌ಗಳನ್ನು ಕಲೆಹಾಕಿದ್ದು, ಇದರಲ್ಲಿ ಮೂರು ಶತಕ ಮತ್ತು ಮೂರು ಅರ್ಧಶತಕಗಳನ್ನು ದಾಖಲಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಶೋರೆ - ಅನುಸ್ತಪ್ ಮಜುಂದಾರ್
ದೆಹಲಿ ತಂಡದ ಧ್ರುವ್ ಶೋರೆ, ಬಂಗಾಳದ ಅನುಭವಿ ಬ್ಯಾಟರ್ ಅನುಸ್ತಪ್ ಮಜುಂದಾರ್, ಕೇರಳದ ಸ್ಟಾರ್ ಆಟಗಾರ ಸಚಿನ್ ಬೇಬಿ ಮತ್ತು ಸೌರಾಷ್ಟ್ರದ ಉಪ ನಾಯಕ ಅರ್ಪಿತ್ ವಾಸವಾಡ ಅವರುಗಳು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಗ್ರೂಪ್ ಹಂತದಲ್ಲಿ ಹೊರಹಾಕಲ್ಪಟ್ಟ ತಂಡಗಳಲ್ಲಿ ಧ್ರುವ್ ಶೋರೆ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಶೋರೆ ದೆಹಲಿ ಪರ ಏಳು ಪಂದ್ಯಗಳಲ್ಲಿ 859 ರನ್ ಗಳಿಸಿದರು. ಅವರ ಗರಿಷ್ಠ ಸ್ಕೋರ್ ಅಜೇಯ 252 ರನ್ ಆಗಿದೆ. ಅನುಸ್ತಪ್ ಮಜುಂದಾರ್ ಬಂಗಾಳ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 15 ಇನ್ನಿಂಗ್ಸ್‌ಗಳಲ್ಲಿ ಒಟ್ಟು 867 ರನ್ ಗಳಿಸಿದ್ದಾರೆ.
ಇನ್ನು ಸಚಿನ್ ಬೇಬಿ ಪಂದ್ಯಾವಳಿಯಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಅಟಗಾರನಾಗಿದ್ದಾರೆ. ಕೇರಳ ಪರ ಆಡಿದ ಅವರು 13 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳೊಂದಿಗೆ 830 ರನ್ ಗಳಿಸಿದ್ದಾರೆ.

ರಣಜಿ ಪಂದ್ಯಾವಳಿಯಲ್ಲಿ 907 ರನ್ ಗಳಿಸಿದ ಅರ್ಪಿತ್ ವಾಸವಾಡ
ಅರ್ಪಿತ್ ವಾಸವಾಡ ಈ ಬಾರಿ ರಣಜಿ ಪಂದ್ಯಾವಳಿಯಲ್ಲಿ 907 ರನ್ ಗಳಿಸಿದ ನಂತರ, ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕರ್ನಾಟಕದ ವಿರುದ್ಧದ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರದ ಈ ಬ್ಯಾಟರ್ ಅಮೋಘ ದ್ವಿಶತಕದೊಂದಿಗೆ ಪಂದ್ಯವನ್ನು ಗೆಲ್ಲಿಸಿದರು.
ಇನ್ನು ಕೇರಳದ ಜಲಜ್ ಸಕ್ಸೇನಾ ಮತ್ತು ಮುಂಬೈನ ಶಮ್ಸ್ ಮುಲಾನಿ 2022-23ರ ರಣಜಿ ಅತ್ಯುತ್ತಮ ತಂಡದ ಇಬ್ಬರು ಸ್ಪಿನ್-ಆಲ್‌ರೌಂಡರ್‌ಗಳಾಗಿದ್ದಾರೆ. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಜಲಜ್ ಸಕ್ಸೇನಾ ಏಳು ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದರೆ, ಶಮ್ಸ್ ಮುಲಾನಿ ಅದೇ ಏಳು ಪಂದ್ಯಗಳಲ್ಲಿ 46 ವಿಕೆಟ್‌ಗಳನ್ನು ಪಡೆದರು.

2022/23ರ ಋತುವಿನ ರಣಜಿ ಟ್ರೋಫಿ ಅತ್ಯುತ್ತಮ ಆಡುವ 11ರ ಬಳಗ
ಮಯಾಂಕ್ ಅಗರ್ವಾಲ್, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಧ್ರುವ್ ಶೋರೆ, ಅನುಸ್ತುಪ್ ಮಜುಂದಾರ್, ಸಚಿನ್ ಬೇಬಿ, ಅರ್ಪಿತ್ ವಾಸವಾಡ, ಜಲಜ್ ಸಕ್ಸೇನಾ, ಶಮ್ಸ್ ಮುಲಾನಿ, ಆಕಾಶ್ ದೀಪ್, ಅವೇಶ್ ಖಾನ್, ಬಲ್ತೇಜ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications