For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ದ್ವಿಶತಕದತ್ತ ಪಡಿಕ್ಕಲ್; ಮೊದಲ ದಿನ ಪುದುಚೆರಿ ವಿರುದ್ಧ ಕರ್ನಾಟಕ ಮೇಲುಗೈ

Ranji Trophy 2022: Devdutt Padikkals unbeaten 161 helps Karnataka to lead on day 1 vs Puducherry

ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ನಡೆಯದೇ ಇದ್ದ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಈ ವರ್ಷ ಮರಳಿ ಬಂದಿದ್ದು ಫೆಬ್ರವರಿ 17ರಿಂದ ಆರಂಭವಾಗಿದೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಫಾರ್ಮ್ ಕಳೆದುಕೊಂಡಿರುವ ಹಿರಿಯ ಆಟಗಾರರಿಗೆ ಹಾಗೂ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಈ ರಣಜಿ ಟ್ರೋಫಿ ಉತ್ತಮ ವೇದಿಕೆಯಾಗಿದ್ದು, ಟೂರ್ನಿಯ ಗ್ರೂಪ್ ಹಂತದ ಎಲ್ಲ ತಂಡಗಳ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಸದ್ಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿವೆ. ಇನ್ನು ಈ ಬಾರಿಯ ರಣಜಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಮೊದಲನೇ ಪಂದ್ಯದಲ್ಲಿ ಡ್ರಾ ಮಾಡಿಕೊಂಡು ತನ್ನ ದ್ವಿತೀಯ ಪಂದ್ಯದಲ್ಲಿ ಗೆಲುವನ್ನು ಕಂಡಿದೆ.

ಹೌದು, ಫೆಬ್ರವರಿ 17ರಂದು ಆರಂಭವಾಗಿದ್ದ ಕರ್ನಾಟಕ ಮತ್ತು ರೈಲ್ವೇಸ್ ತಂಡಗಳ ನಡುವಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟಕ ಟೂರ್ನಿಯಲ್ಲಿನ ತನ್ನ ದ್ವಿತೀಯ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ 117 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸುವುದರ ಮೂಲಕ ಗೆಲುವಿನ ಖಾತೆ ತೆರೆದಿತ್ತು. ಹೀಗೆ ಟೂರ್ನಿಯಲ್ಲಿನ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಡ್ರಾ ಮತ್ತು ಗೆಲುವನ್ನು ಕಂಡಿರುವ ಕರ್ನಾಟಕ ತನ್ನ ತೃತೀಯ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಎದುರಿಸುತ್ತಿದೆ. ಹೌದು, ರಣಜಿ ಟ್ರೋಫಿಯ ಮೂರನೇ ಪಂದ್ಯಗಳು ಇಂದಿನಿಂದ ( ಮಾರ್ಚ್ 3 ) ಆರಂಭವಾಗಿದ್ದು, ಕರ್ನಾಟಕ ಮತ್ತು ಪುದುಚೇರಿ ತಂಡಗಳ ನಡುವಿನ ಪಂದ್ಯ ಚೆನ್ನೈನ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ನಾಡಾರ್ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪುದುಚೇರಿ ಬೌಲಿಂಗ್ ಆಯ್ದುಕೊಂಡಿದ್ದು, ಎದುರಾಳಿ ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಪರ ಆರಂಭಿಕ ಆಟಗಾರರಾಗಿ ರವಿಕುಮಾರ್ ಸಮರ್ಥ್ ಮತ್ತು ದೇವದತ್ ಪಡಿಕ್ಕಲ್ ಕಣಕ್ಕಿಳಿದರು. ರವಿಕುಮಾರ್ ಸಮರ್ಥ್ 11 ರನ್ ಗಳಿಸಿ ಔಟ್ ಆದರೆ, ದೇವದತ್ ಪಡಿಕ್ಕಲ್ ಅಜೇಯ 161 ರನ್ ಬಾರಿಸಿದ್ದಾರೆ. ಹೌದು, ಕರ್ನಾಟಕ ಮತ್ತು ಪುದುಚೆರಿ ತಂಡಗಳ ನಡುವಿನ ಪಂದ್ಯದ ಮೊದಲನೇ ದಿನದಾಟ ಮುಕ್ತಾಯದ ಹಂತಕ್ಕೆ ಕರ್ನಾಟಕ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿ ಮೇಲುಗೈ ಸಾಧಿಸಿದೆ. ದೇವದತ್ ಪಡಿಕ್ಕಲ್ ಸಿಡಿಸಿದ ಅಜೇಯ 161 ರನ್ ಕರ್ನಾಟಕದ ಉತ್ತಮ ಸ್ಥಿತಿಗೆ ಪ್ರಮುಖ ಕಾರಣ ಎನ್ನಬಹುದು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೃಷ್ಣಮೂರ್ತಿ ಸಿದ್ಧಾರ್ಥ್ 85 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು ಮತ್ತು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮನೀಷ್ ಪಾಂಡೆ ಅಜೇಯ 21 ರನ್ ಗಳಿಸಿದ್ದು, ದೇವದತ್ ಪಡಿಕ್ಕಲ್ ಜೊತೆ ಎರಡನೇ ದಿನದಾಟ ಆಡಲಿದ್ದಾರೆ.

ಇನ್ನು ಪುದುಚೇರಿ ತಂಡದ ಪರ ಆಶಿತ್ ರಾಜೀವ್ 2 ವಿಕೆಟ್ ಪಡೆದರೆ, ಸಾಗರ್ ಉದೇಶಿ 1 ವಿಕೆಟ್ ಪಡೆದುಕೊಂಡಿದ್ದಾರೆ. ಈ ಮೂಲಕ ಪುದುಚೇರಿ ತಂಡದ ಬೌಲಿಂಗ್ ವಿಭಾಗ ಮೊದಲನೇ ದಿನದಾಟದಂದು ಕರ್ನಾಟಕ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾಗಿದೆ.

ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ವಿಧ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ

ಪಾಂಡಿಚೇರಿ ಪ್ಲೇಯಿಂಗ್ ಇಲೆವೆನ್: ಪಾರಸ್ ಡೋಗ್ರಾ, ದಾಮೋದರನ್ ರೋಹಿತ್ (ನಾಯಕ), ಸುಬೋತ್ ಭಾಟಿ, ಪವನ್ ದೇಶಪಾಂಡೆ, ಎಸ್ ಕಾರ್ತಿಕ್ (ವಿಕೆಟ್ ಕೀಪರ್), ಅರವಿಂದ್ ಕೋತಂಡಪಾಣಿ, ನೆಯಾನ್ ಶ್ಯಾಮ್ ಕಂಗಾಯನ್, ಸಾಗರ್ ತ್ರಿವೇದಿ, ಸಾಗರ್ ಉದೇಶಿ, ಗೊನ್ನಾಬತ್ತುಲ ಚಿರಂಜೀವಿ, ಆಶಿತ್ ರಾಜೀವ್

Story first published: Friday, March 4, 2022, 10:02 [IST]
Other articles published on Mar 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+