
ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಮತ್ತೊಮ್ಮೆ ರಣಜಿ ಟ್ರೋಫಿಯಲ್ಲಿ ಆಡುತ್ತಿಲ್ಲ. ಪಾಂಡ್ಯ ಅಧಿಕೃತವಾಗಿ ರಣಜಿ ಟ್ರೋಫಿಯಿಂದ ಹೊರನಡೆದಿದ್ದಾರೆ. ಮುಂಬರುವ ಐಪಿಎಲ್ 2022ರ ಹಿನ್ನೆಲೆಯಲ್ಲಿ ಪಾಂಡ್ಯ ಈ ನಿರ್ಧಾರ ಕೈಗೊಂಡಿದ್ದಾರೆ.
ಗಾಯಾಳುವಾಗಿರುವ ಪಾಂಡ್ಯ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದು, ಕಳೆದ ಐಪಿಎಲ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಮುಂಬರುವ ಐಪಿಎಲ್‌ನಲ್ಲಿ ಮಿಂಚು ಹರಿಸಿ ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡಕ್ಕೆ ಮರು ಪ್ರವೇಶ ಮಾಡುವ ನಿರೀಕ್ಷೆಯನ್ನ ಹೊಂದಿದ್ದಾರೆ.
ಪ್ರಸಕ್ತ ರಣಜಿ ಟ್ರೋಫಿ ಇದೇ ತಿಂಗಳ 10 ರಂದು ಆರಂಭವಾಗಲಿದೆ. ಎರಡು ಹಂತದ ಟ್ರೋಫಿಯ ಮೊದಲ ಹಂತವು ಮಾರ್ಚ್ 10 ರಿಂದ ಮಾರ್ಚ್ 15 ರವರೆಗೆ ನಡೆಯಲಿದ್ದು, ಎರಡನೇ ಹಂತ ಐಪಿಎಲ್ ಮುಗಿದ ಬಳಿಕ ನಡೆಯಲಿದೆ. 62 ದಿನಗಳ ಕಾಲ ನಡೆಯಲಿರುವ ಈ ಬಾರಿಯ ರಣಜಿ ಟೂರ್ನಿಯಲ್ಲಿ 64 ಪಂದ್ಯಗಳು ನಡೆಯಲಿವೆ.
ಅದ್ರೆ ರಣಜಿ ಎರಡನೇ ಹಂತ ಮೇ 30 ರಿಂದ ಜೂನ್ 26 ರವರೆಗೆ ನಡೆಯಲಿದೆ. ಹಾರ್ದಿಕ್ ಪಾಂಡ್ಯ ರಣಜಿ ಟ್ರೋಫಿಯಲ್ಲಿ ಬರೋಡಾವನ್ನು ಪ್ರತಿನಿಧಿಸುತ್ತಾರೆ. ಆದ್ರೀಗ ಪಾಂಡ್ಯ ಅಲಭ್ಯತೆಯಿಂದಾಗಿ ಬರೋಡಾ ತಂಡವನ್ನ ಕೇದಾರ್ ದಿಯೋಧರ್ ಮುನ್ನಡೆಸಲಿದ್ದಾರೆ. ವಿಷ್ಣು ಸೋಲಂ ಉಪನಾಯಕರಾಗಿರುತ್ತಾರೆ. 20 ಸದಸ್ಯರ ಬರೋಡಾ ತಂಡದಿಂದ ಹಾರ್ದಿಕ್ ಪಾಂಡ್ಯ ತಪ್ಪಿಸಿಕೊಂಡಿದ್ದರೂ, ಅವರ ಸಹೋದರ ಕೃನಾಲ್ ಪಾಂಡ್ಯ ಈ ಬಾರಿಗೆ ಕಣಕ್ಕಿಳಿಯಲಿದ್ದಾರೆ.
ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಮತ್ತೆ ಭಾರತ ತಂಡದಲ್ಲಿ ಆಡಿರಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅವರು ಫಿಟ್ನೆಸ್ ಸಮಸ್ಯೆಯಿಂದ ಹೊರಗಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಆಡುವ ನಿರೀಕ್ಷೆಯಿದ್ದರೂ ಆಯ್ಕೆಗಾರರು ಅವರನ್ನು ಆಯ್ಕೆ ಮಾಡಲಿಲ್ಲ. ಈ ನಿಟ್ಟಿನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಣಜಿ ಟ್ರೋಫಿಯಲ್ಲಿ ಆಡಿ ಹಾರ್ದಿಕ್ ಪಾಂಡ್ಯ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕು ಎಂದು ಹೇಳಿದ್ದರು. ಆದ್ರೀಗ ಅದರಿಂದಲೂ ಪಾಂಡ್ಯ ಹೊರನಡೆದಿದ್ದು, ಐಪಿಎಲ್‌ನಲ್ಲಿ ಯಾವ ರೀತಿಯ ಪರ್ಫಾಮೆನ್ಸ್ ನೀಡುತ್ತಾರೆ ಕಾದುನೋಡಬೇಕಿದೆ.
ಕಳೆದ ಐಪಿಎಲ್ ಸೀಸನ್ ನಿಂದಲೂ ಬೆನ್ನು ನೋವಿನ ಕಾರಣ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿಲ್ಲ. ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ಪಾಂಡ್ಯ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು ಹೊಸ ಫ್ರಾಂಚೈಸಿ ಅಹಮದಾಬಾದ್ ಟೈಟನ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಹಮದಾಬಾದ್ ಫ್ರಾಂಚೈಸಿ ಈತನಿಗೆ 15 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಬರೋಡಾ ರಣಜಿ ಸ್ಕ್ವಾಡ್
ಕೇದಾರ್ ದೇವಧರ್ (ನಾಯಕ) ವಿಷ್ಣು ಸೋಲಂಕಿ (ಉಪ ನಾಯಕ), ಪ್ರತ್ಯೂಷ್ ಕುಮಾರ್, ಶಿವಾಲಿಕ್ ಶರ್ಮಾ, ಕೃನಾಲ್ ಪಾಂಡ್ಯ, ಅಭಿಮನ್ಯುಸಿಂಗ್ ರಜಪೂತ್, ಧ್ರುವ ಪಟೇಲ್, ಮಿತೇಶ್ ಪಟೇಲ್, ಲುಕ್ಮಾನ್ ಮೇರಿವಾಲಾ, ಬಾಬಾ ಸಫಿಖಾನ್ ಪಠಾಣ್ (ವಿಕೆಟ್ ಕೀಪರ್), ಅತಿತ್ ಶೇಠ್, ಭಾರ್ಗವ್ ಭಟ್, ಪಾರ್ಥ್ ಕೊಹ್ಲಿ, ಶಾಶ್ವತ್ ಕರಾವತ್, ಕಾರಯೇಬ್ ರಾವತ್ , ಗುರ್ಜಿಂದರ್‌ಸಿಂಗ್ ಮನ್, ಜ್ಯೋತ್ಸ್ನಿಲ್ ಸಿಂಗ್, ನಿನಾದ್ ರಥ್ವಾ, ಅಕ್ಷಯ್ ಮೋರ್.
ರಣಜಿ ಎಲೈಟ್ ಗ್ರೂಪ್
ರಣಜಿಯಲ್ಲಿ ಭಾಗವಹಿಸುವ ಎ, ಬಿ, ಸಿ, ಡಿ, ಇ, ಎಫ್, ಜಿ, ಎಚ್ ಎಲೈಟ್ ಗ್ರೂಪ್‌ಗಳಾಗಿ ವಿಂಗಡಿಸಲಾಗಿದೆ. ಅವು ಈ ಕೆಳಗಿನಂತಿದೆ.
ಎಲೈಟ್ ಗ್ರೂಪ್ ಎ: ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಮೇಘಾಲಯ (ಪಂದ್ಯಗಳು ರಾಜ್‌ಕೋಟ್‌ನಲ್ಲಿ ನಡೆಯಲಿವೆ)
ಎಲೈಟ್ ಗ್ರೂಪ್ ಬಿ: ಬಂಗಾಳ, ಬರೋಡಾ, ಹೈದರಾಬಾದ್, ಚಂಡೀಗಢ (ಪಂದ್ಯಗಳು ಕಟಕ್‌ನಲ್ಲಿ ನಡೆಯಲಿವೆ)
ಎಲೈಟ್ ಗ್ರೂಪ್ ಸಿ: ಕರ್ನಾಟಕ, ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ, ಪಾಂಡಿಚೇರಿ (ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ)
ಎಲೈಟ್ ಗುಂಪು ಡಿ: ಸೌರಾಷ್ಟ್ರ, ಮುಂಬೈ, ಒಡಿಶಾ, ಗೋವಾ (ಅಹಮದಾಬಾದ್‌ನಲ್ಲಿ ಪಂದ್ಯಗಳು)
ಎಲೈಟ್ ಗುಂಪು ಇ: ಆಂಧ್ರ ಪ್ರದೇಶ, ರಾಜಸ್ಥಾನ, ಸೇವೆಗಳು, ಮತ್ತು ಉತ್ತರಾಖಂಡ
ಎಲೈಟ್ ಗುಂಪು ಎಫ್: ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ತ್ರಿಪುರಾ
ಎಲೈಟ್ ಗುಂಪು ಜಿ: ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಅಸ್ಸಾಂ
ಎಲೈಟ್ ಗುಂಪು ಎಚ್: ದೆಹಲಿ, ತಮಿಳುನಾಡು , ಜಾರ್ಖಂಡ್, ಮತ್ತು ಛತ್ತೀಸ್‌ಗಢ