
ಗುರುವಾರದಂದು ರಾಂಚಿಯಲ್ಲಿ ನಡೆದ ರಣಜಿ ಟ್ರೋಫಿ 2022-23ರ ಸಿ ಗುಂಪಿನ ಪಂದ್ಯದಲ್ಲಿ ಕೇರಳ ತಂಡದ ವಿರುದ್ಧ ಜಾರ್ಖಂಡ್ ತಂಡದ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಶಾನ್ ಕಿಶನ್ ಅದ್ಭುತ ಶತಕ ಬಾರಿಸಿದರು. ತನ್ನ ತವರಿನ ತಂಡದ ಹೋರಾಟವನ್ನು ಜೀವಂತವಾಗಿರಿಸಲು ಪ್ರಭಾವಶಾಲಿ ಪ್ರದರ್ಶನವನ್ನು ಮುಂದುವರೆಸಿದರು.
ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅತಿವೇಗದ ಏಕದಿನ ದ್ವಿಶತಕ ಸಿಡಿಸಿದ ಐದು ದಿನಗಳ ನಂತರ, ಇಶಾನ್ ಕಿಶನ್ 195 ಎಸೆತಗಳಲ್ಲಿ 132 ರನ್ ಬಾರಿಸಿದರು. ಇದರಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್‌ಗಳು ಒಳಗೊಂಡಿದ್ದವು.
ಮೂರು ವಿಕೆಟ್ ನಷ್ಟಕ್ಕೆ 87 ರನ್‌ಗಳಿಂದ ದಿನದಾಟ ಮುಂದುವರಿಸಿದ ಜಾರ್ಖಂಡ್ ಕೇವಲ 27 ರನ್‌ಗಳ ಜೊತೆಗೆ ನಾಯಕ ವಿರಾಟ್ ಸಿಂಗ್ (30) ಅವರನ್ನು ಕಳೆದುಕೊಂಡಿತು.
ಜಾರ್ಖಂಡ್ ತಂಡ 114 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಇಶಾನ್ ಕಿಶನ್ 340 ರನ್‌ಗೆ ಆಲೌಟ್ ಆದ ಜಾರ್ಖಂಡ್ ತಂಡದ ಚೇತರಿಕೆಗೆ ಕಾರಣರಾದರು. ಅಲ್ಲದೆ ಸೌರಭ್ ತಿವಾರಿ (97) ಅವರೊಂದಿಗೆ ಐದನೇ ಜೊತೆಯಾಟಕ್ಕೆ 202 ರನ್‌ಗಳ ಜೊತೆಯಾಟ ನೀಡಿದರು.
ಇಶಾನ್ ಕಿಶನ್‌ಗೆ ಬೆಂಬಲ ನೀಡಿದ ಸೌರಭ್ ತಿವಾರಿ ಅವರು ಜಲಜ್ ಸಕ್ಸೇನಾ ಅವರ ಬೌಲಿಂಗ್‌ನಲ್ಲಿ ಔಟಾದಾಗ ಕೇವಲ ಮೂರು ರನ್‌ಗಳಿಂದ ಅತ್ಯುತ್ತಮ ಶತಕವನ್ನು ತಪ್ಪಿಸಿಕೊಂಡರು.
ಕೇರಳ ಪರ ಬೌಲಿಂಗ್‌ನಲ್ಲಿ ಜಲಜ್ ಸಕ್ಸೇನಾ 75 ರನ್‌ಗೆ 5 ವಿಕೆಟ್ ಗೊಂಚಲು ಪಡೆದರು. ಇನ್ನು ಬಾಸಿಲ್ ಥಂಪಿ 55 ರನ್‌ಗೆ 3 ವಿಕೆಟ್ ಮತ್ತು ವೈಶಾಖ್ ಚಂದ್ರನ್ 81 ರನ್‌ಗೆ 2 ವಿಕೆಟ್ ಪಡೆದರು.
ರಾಂಚಿಯ JSCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಾರ್ಖಂಡ್ 340 ರನ್‌ಗೆ ಆಲೌಟ್ ಆಗುವುದರೊಂದಿಗೆ ಕೇರಳ 135 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿ ಕೇರಳ ತಂಡ, ಒಂದು ವಿಕೆಟ್‌ಗೆ 60 ರನ್ ಗಳಿಸಿ ಒಟ್ಟಾರೆ 195 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.