
ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿರುವ ಕರ್ನಾಟಕ ತಂಡ ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದ್ದು ಗುರುವಾರ ಜಮ್ಮು ಕಾಶ್ಮಿರದ ವಿರುದ್ಧ ಈ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕರ್ನಾಟಕ ಪ್ರಮುಖ ಆಟಗಾರ ಮಯಾಂಕ್ ಅಗರ್ವಾಲ್ ಅವರ ಸೇವೆಯನ್ನು ಕಳೆದುಕೊಳ್ಳಲಿದ್ದು ಮಯಾಂಕ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಕರ್ನಾಟಕ ತಂಡವನ್ನು ತೊರೆದಿದ್ದಾರೆ. ಆದರೆ ಅನುಭವಿ ಆಟಗಾರ ಕರುಣ್ ನಾಯರ್ ಕೊರೊನಾವೈರಸ್‌ನಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಮರಳಿದ್ದಾರೆ. ಪ್ರಸಿದ್ಧ್ ಕೃಷ್ಣ ಕೂಡ ಕರ್ನಾಟಕದ ಪರವಾಗಿ ಕಣಕ್ಕಿಳಿಯಲಿದ್ದಾರೆ.
ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ರೈಲ್ವೇಸ್ ತಂಡದ ಪರವಾಗಿ ಆಡಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 481 ರನ್‌ಗಳಿಸಿ ಮುನ್ನಡೆಯನ್ನು ಸಾಧಿಸಿತ್ತು. ಈ ಪಂದ್ಯದಲ್ಲಿ ಕೆ ಸಿದ್ಧಾರ್ಥ್ ಹಾಗೂ ನಾಯಕ ಮನೀಶ್ ಪಾಂಡೆ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಇನ್ನು ರೈಲ್ವೇಸ್ ತಂಡ ಕೂಡ ಈ ಪಂದ್ಯದಲ್ಲಿ ಅತ್ಯುತ್ತಮ ಹೋರಾಟವನ್ನು ಮಾಡಿತ್ತು. ಆದರೆ ಆಫ್ ಸ್ಪಿನ್ನರ್ ಕೆ ಗೌತಮ್ ಹಾಗೂ ವೇಗಿ ರೋನಿತ್ ಮೋರೆ ಉತ್ತಮ ಬೌಲಿಂಗ್ ಪ್ರದರ್ಶನದ ಕಾರಣದಿಂದಾಗಿ 426 ರನ್‌ಗಳಿಗೆ ಆಲೌಟ್ ಆಗಿದ್ದು ಕರ್ನಾಟಕ ತಂಡದ ಮುನ್ನಡೆಗೆ ಕಾರಣವಾಯಿತು.
ಇತ್ತ ಜಮ್ಮು ಕಾಶ್ಮೀರ ತನ್ನ ಮೊದಲ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಸುಲಭ ಗೆಲುವು ಸಾಧಿಸುವ ಮೂಲಕ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಅಗ್ರ ಕ್ರಮಾಂಕದ ಆಟಗಾರರಿಂದ ಬಂದ ಅದ್ಭುತ ಪ್ರದರ್ಶನದ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಅಬ್ಧುಲ್ ಸಮದ್ ಸಿಡಿಸಿದ ಭರ್ಜರಿ ಶತಕ ಮತ್ತು ಆಲ್‌ರೌಂಡರ್ ಪರ್ವೇಜ್ ರಸೂಲ್ ಬೌಲಿಂಗ್ ದಾಳಿಯಿಂದಾಗಿ ಜಮ್ಮು ಕಾಶ್ಮೀರ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಉಮ್ರಾನ್ ಮಲಿಕ್ ಕೂಡ ಈ ಪಂದ್ಯದಲ್ಲಿ ಮಿಂಚಿದ್ದಾರೆ.
ಈ ಮೂಲಕ ಜಮ್ಮು ಕಾಶ್ಮೀರ ಕೂಡ ಈ ಬಾರಿಯ ರಣಜಿ ಟೂರ್ನಿಯಲ್ಲಿ ಎದುರಾಳಿಗಳಿಗೆ ಉತ್ತಮ ಸಂದೇಶವನ್ನು ರವಾನಿಸಿದೆ. ಸಾಮಕಷ್ಟು ಸಮರ್ಥ ಹಾಗೂ ಪ್ರತಿಭಾನ್ವಿತ ಆಟಗಾರರನ್ನು ಜಮ್ಮು ಕಾಶ್ಮೀರ ತಮಡ ಹೊಂದಿರುವುದು ಯಾವುದೇ ಎದುರಾಳಿಗಳಿಗೂ ಸವಾಲಾಗಿರಲಿದೆ.
ಹಾಗಿದ್ದರೂ ಈ ಪಂದ್ಯದಲ್ಲಿ ಕರ್ನಾಟಕ ತಂಡ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸುವುದರಲ್ಲಿ ಅನುಮಾನವಿಲ್ಲ. ಕರ್ನಾಟಕ ತಮಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಸಮತೋಲನ ಕಾಣಿಸುತ್ತದೆ. ಅಲ್ಲದೆ ತಂಡದಲ್ಲಿ ಸಾಕಷ್ಟು ಉತ್ತಮ ಆಯ್ಕೆಗಳು ಕೂಡ ಇರುವುದು ಅನುಕೂಲಕರವಾಗಲಿದೆ.