ರಣಜಿ 2022: ಕರ್ನಾಟಕ vs ರೈಲ್ವೇಸ್ ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ ಮತ್ತು ಹವಾಮಾನ ವರದಿ

ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳಲ್ಲಿ ನಡೆಯದೇ ಇದ್ದ ಜನಪ್ರಿಯ ದೇಸಿ ಕ್ರಿಕೆಟ್ ಟೂರ್ನಮೆಂಟ್ ರಣಜಿ ಟ್ರೋಫಿ ಇದೀಗ ಮರಳಿ ಬಂದಿದೆ. ಭಾರತದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಇದಾಗಿದ್ದು, ಟೀಮ್ ಇಂಡಿಯಾದಲ್ಲಿ ಕಳಪೆ ಪ್ರದರ್ಶನ ನೀಡಿ ಹೊರಬಿದ್ದಿರುವ ಹಿರಿಯ ಕ್ರಿಕೆಟಿಗರಿಗೂ ಕೂಡ ರಣಜಿ ಟ್ರೋಫಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಹೀಗೆ ಸಾಕಷ್ಟು ಮಹತ್ವವನ್ನು ಹೊಂದಿರುವ ರಣಜಿ ಟ್ರೋಫಿ 2022ನೇ ಸಾಲಿನ ಟೂರ್ನಿ ಇಂದಿನಿಂದ ( ಫೆಬ್ರವರಿ 17 ) ಆರಂಭವಾಗುತ್ತಿದ್ದು, ಮೊದಲನೇ ದಿನ ಆರಂಭವಾಗಿರುವ 19 ಪಂದ್ಯಗಳ ಪೈಕಿ ಕರ್ನಾಟಕ ಮತ್ತು ರೈಲ್ವೇಸ್ ತಂಡಗಳು ಪಂದ್ಯವೊಂದರಲ್ಲಿ ಸೆಣಸಾಟ ನಡೆಸುತ್ತಿವೆ.
ಕಳೆದ ಬಾರಿ ನಡೆದಿದ್ದ ರಣಜಿ ಟ್ರೋಫಿಯ ಗ್ರೂಪ್ ಹಂತದಲ್ಲಿ 8 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದ್ದ ಕರ್ನಾಟಕ ತಂಡ ಗ್ರೂಪ್ ಸುತ್ತಿನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡು ಕ್ವಾರ್ಟರ್ ಫೈನಲ್ ಹಂತದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಬೆಂಗಾಲ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 174 ರನ್‌ಗಳ ಸೋಲನ್ನು ಅನುಭವಿಸಿದ್ದ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿತ್ತು. ಅತ್ತ ಕಳೆದ ಬಾರಿಯ ರಣಜಿ ಟ್ರೋಫಿ ಟೂರ್ನಿಯ ಗ್ರೂಪ್ ಹಂತದಲ್ಲಿ 8 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದ್ದ ರೈಲ್ವೇಸ್ 4 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ ಉಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಹೀಗೆ ಕಳೆದ ಬಾರಿ ಅತಿ ಕೆಟ್ಟ ಪ್ರದರ್ಶನವನ್ನು ನೀಡಿದ್ದ ರೈಲ್ವೇಸ್ ಈ ಬಾರಿ ಬಲಿಷ್ಠ ಆಟಗಾರರನ್ನು ಹೊಂದಿರುವ ಕರ್ನಾಟಕ ತಂಡದ ವಿರುದ್ಧ ತನ್ನ ಮೊದಲನೇ ಪಂದ್ಯವನ್ನಾಡುತ್ತಿದೆ.
ಪಂದ್ಯ ನಡೆಯುವ ಸ್ಥಳ ಮತ್ತು ದಿನಾಂಕ:
ಗ್ರೂಪ್ ಸಿ ತಂಡಗಳಾದ ಕರ್ನಾಟಕ ಮತ್ತು ರೈಲ್ವೇಸ್ ನಡುವಿನ ಪಂದ್ಯ ಚೆನ್ನೈನ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರು ನಾನಕ್ ಕಾಲೇಜ್ ಗ್ರೌಂಡ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯವು ಫೆಬ್ರವರಿ 17ರಿಂದ ಫೆಬ್ರವರಿ 20ರವರೆಗೆ ನಡೆಯಲಿದ್ದು, ಮೊದಲನೇ ದಿನದಾಟದ ಈಗಾಗಲೇ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರೈಲ್ವೇಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಎದುರಾಳಿ ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಪಿಚ್ ವರದಿ:
ಚೆನ್ನೈನ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರುನಾನಕ್ ಕಾಲೇಜು ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಬ್ಯಾಟ್ಸ್‌ಮನ್ ಒಮ್ಮೆ ನೆಲ ಕಚ್ಚಿ ನಿಂತರೆ ಉತ್ತಮ ಇನ್ನಿಂಗ್ಸ್ ಕಟ್ಟಬಹುದಾದ ಪಿಚ್ ಇದಾಗಿದ್ದು ಆರಂಭದ ಸಮಯದಲ್ಲಿ ತುಸು ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಾದ ಅಗತ್ಯತೆಯಿದೆ. ಇನ್ನು ಸ್ಪಿನ್ ಬೌಲರ್‌ಗಳಿಗೆ ಈ ಪಿಚ್‌ನಲ್ಲಿ ಹೆಚ್ಚಿನ ವಿಕೆಟ್ ಬೀಳಲಿವೆ. ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುವುದರಿಂದ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ ಉತ್ತಮ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ.
ಹವಾಮಾನ ವರದಿ:
ಫೆಬ್ರವರಿ 17ರಿಂದ ಫೆಬ್ರವರಿ 20ರವರೆಗೆ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರುನಾನಕ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಕರ್ನಾಟಕ ಮತ್ತು ರೈಲ್ವೇಸ್ ನಡುವಿನ ಪಂದ್ಯದ ಐದೂ ದಿನಗಳು ಕೂಡ ಯಾವುದೇ ಮಳೆ ಇಲ್ಲದೆ ಸರಾಗವಾಗಿ ನಡೆಯಲಿದೆ. ದಿನದುದ್ದಕ್ಕೂ ಬಿಸಿಲಿರಲಿದ್ದು 26ರಿಂದ 31 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ.
ರೈಲ್ವೇಸ್ ಆಡುವ ಬಳಗ: ಕರ್ಣ್ ಶರ್ಮಾ(ನಾಯಕ), ಮೃಣಾಲ್ ದೇವಧರ್, ವಿವೇಕ್ ಸಿಂಗ್, ಶಿವಂ ಚೌಧರಿ, ಮೊಹಮ್ಮದ್ ಸೈಫ್, ಅರಿಂದಮ್ ಘೋಷ್, ಉಪೇಂದ್ರ ಯಾದವ್(ವಿಕೆಟ್ ಕೀಪರ್), ಅವಿನಾಶ್ ಯಾದವ್, ಯುವರಾಜ್ ಸಿಂಗ್, ಹಿಮಾಂಶು ಸಂಗ್ವಾನ್ ಮತ್ತು ಅಮಿತ್ ಚಂಡಿಕಾ ಪ್ರಸಾದ್ ಮಿಶ್ರಾ
ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಮನೀಶ್ ಪಾಂಡೆ(ನಾಯಕ), ಶ್ರೀನಿವಾಸ್ ಶರತ್(ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿದ್ಯಾಧರ್ ಪಾಟೀಲ್, ಶ್ರೇಯಸ್ ಗೋಪಾಲ್, ರೋನಿತ್ ಮೋರೆ, ವಿಜಯ್ ಕುಮಾರ್ ವೈಶಾಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications