ಭಾನುವಾರ, ಜನವರಿ 7ರಂದು ರಾಜ್‌ಕೋಟ್‌ನಲ್ಲಿ ನಡೆದ ಸೌರಾಷ್ಟ್ರ ಮತ್ತು ಜಾರ್ಖಂಡ್ ನಡುವಿನ 2024ರ ರಣಜಿ ಟ್ರೋಫಿ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ಚೇತೇಶ್ವರ ಪೂಜಾರ ಅವರು ದ್ವಿಶತಕ ಬಾರಿಸುವ ಮೂಲಕ ಗಮನ ಸೆಳೆದರು.
ಈ ಮೂಲಕ ಚೇತೇಶ್ವರ ಪೂಜಾರ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರಲ್ಲದೆ, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮನ್ನು ಆಯ್ಕೆಗೆ ಪರಿಗಣಿಸುವಂತೆ ಬಿಸಿಸಿಐಗೆ ಸೂಚನೆ ನೀಡಿದರು.
ಜಾರ್ಖಂಡ್ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ 142 ರನ್‌ಗಳಿಗೆ ಪ್ರತಿಯಾಗಿ, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ ತಂಡ 578 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು ಮತ್ತು 436 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿತು.

ಸೌರಾಷ್ಟ್ರ ಬ್ಯಾಟಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ಚೇತೇಶ್ವರ ಪೂಜಾರ, 456 ಎಸೆತಗಳನ್ನು ಎದುರಿಸಿ 30 ಬೌಂಡರಿಗಳ ಸಮೇತ ಅಜೇಯ 243 ರನ್ ಬಾರಿಸಿದರು.
ಇದೇ ವೇಳೆ ಚೇತೇಶ್ವರ ಪೂಜಾರ ಅವರು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ಹಿಂದಿಕ್ಕಿ ಭಾರತೀಯ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರಥಮ ದರ್ಜೆ ರನ್ ಗಳಿಸಿದರು.
ಮೂರನೇ ದಿನದ ಆಟದಲ್ಲಿ ಸೌರಾಷ್ಟ್ರ ತಂಡದ ಪರ ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್ ದಾಟಿದ ನಂತರ, ಚೇತೇಶ್ವರ ಪೂಜಾರ ಅವರು ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 19,730 ರನ್ ಗಳಿಸಿದ್ದ ವಿವಿಎಸ್ ಲಕ್ಷ್ಮಣ್ ಅವರನ್ನು ಹಿಂದಿಕ್ಕಿದರು.
ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ 25,834 ರನ್‌ಗಳೊಂದಿಗೆ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ 25,396 ಪ್ರಥಮ ದರ್ಜೆ ರನ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಮುಗಿಸಿದರು.

ಕನ್ನಡಿಗ ಹಾಗೂ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 23,794 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿ ವೇಳೆ ಒಂದಿಬ್ಬರು ಆಟಗಾರರನ್ನು ಹೊರತುಪಡಿಸಿ ಭಾರತೀಯ ತಂಡದ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿತ್ತು. ಈ ವೇಳೆ ಆಪತ್ಬಾಂಧವ ಚೇತೇಶ್ವರ ಪೂಜಾರ ಇರಬೇಕಿತ್ತು ಎಂದು ಎಲ್ಲರಿಗೂ ಅನಿಸಿದ್ದುಂಟು.
ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ಆಡುವ ಮತ್ತು ತಂಡದ ಸ್ಕೋರ್ ಬೋರ್ಡ್ ಅನ್ನು ಹೆಚ್ಚಿಸುವ ಸಾಮರ್ಥ್ಯವಿರುವ ಚೇತೇಶ್ವರ ಪೂಜಾರ ಅವರನ್ನು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಬಹುದೇ ಎಂಬುದು ಕುತೂಹಲ ಮೂಡಿಸಿದೆ.
ಕಳೆದ ವರ್ಷ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ನಂತರ, ಚೇತೇಶ್ವರ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಇದೀಗ ರಣಜಿ ಟ್ರೋಫಿಯಲ್ಲಿ ಮತ್ತೆ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದು, ಬಿಸಿಸಿಐ ಆಯ್ಕೆಗೆ ಪರಿಗಣಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.