Ranji Trophy: ಸೌರಾಷ್ಟ್ರ ತಂಡಕ್ಕೆ ಆರಂಭಿಕ ಆಘಾತ: ಮೇಲುಗೈ ಸಾಧಿಸಿದ ಮಯಾಂಕ್ ಪಡೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಎರಡನೇ ದಿನ ಮೇಲುಗೈ ಸಾಧಿಸಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್ ಗಳಿಸುಷ್ಟರಲ್ಲಿ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ಎರಡನೇ ದಿನದಾಟ ಮುಕ್ತಾಯವಾದಾಗ 76 ರನ್ ಗಳಿಸಿದ್ದು 2 ವಿಕೆಟ್ ಕಳೆದುಕೊಂಡಿದೆ.
ಮೊದಲನೇ ದಿನ 229 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡ, ಎರಡನೇ ದಿನ ಬೇಗನೆ ವಿಕೆಟ್ ಕಳೆದುಕೊಂಡಿತು. ಮೊದಲ ದಿನದಾಂತ್ಯಕ್ಕೆ ಅರ್ಧಶತಕ ಗಳಿಸಿದ್ದ ಶ್ರೀನಿವಾಸ್ ಶರತ್ 66 ರನ್ ಗಳಿಸುವಷ್ಟರಲ್ಲಿ ಔಟ್ ಆದರು. ಒಂದು ಕಡೆ ಮಯಾಂಕ್ ಅಗರ್ವಾಲ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರೆ ಮತ್ತೊಂದೆಡೆ ವಿಕೆಟ್‌ಗಳು ಉರುಳಿದವು.
ಕೃಷ್ಣಪ್ಪ ಗೌತಮ್ 2 ರನ್ ಗಳಿಸುವಷ್ಟರಲ್ಲಿ ಔಟಾದರು. ವಿಜಯ್ ಕುಮಾರ್ ವೈಶಾಕ್ 6 ರನ್ ಗಳಿಸಿ ಔಟಾದರು. ನಂತರ ಬಂದ ವಿದ್ವತ್ ಕಾವೇರಪ್ಪ ನಾಯಕನಿಗೆ ಅತ್ಯುತ್ತಮವಾಗಿ ಸಾಥ್ ನೀಡಿದರು. 278 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡಕ್ಕೆ ವಿದ್ವತ್ ಕಾವೇರಪ್ಪ ಮತ್ತು ಮಯಾಂಕ್ ಅಗರ್ವಾಲ್ ಆಸರೆಯಾದರು.

ಮಯಾಂಕ್-ಕಾವೇರಪ್ಪ ಜೊತೆಯಾಟ
9ನೇ ವಿಕೆಟ್‌ಗೆ ಈ ಜೋಡಿ 89 ರನ್‌ಗಳನ್ನು ಗಳಿಸಿತು. 42 ಎಸೆತಗಳನ್ನು ಎದುರಿಸಿದ ವಿಧ್ವತ್ ಕಾವೇರಪ್ಪ 3 ಬೌಂಡರಿ ಸಹಿತ 15 ರನ್ ಗಳಿಸಿದರು. ನಾಯಕ ಮಯಾಂಕ್ ಅಗರ್ವಾಲ್ ಕೂಡ ತಮ್ಮ ದ್ವಿಶತಕ ಪೂರೈಸುವ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.
369 ರನ್ ಗಳಿಸಿದ್ದಾಗ ವಿಧ್ವತ್ ಕಾವೇರಪ್ಪ ಚೇತನ್ ಸಕಾರಿಯ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ನಂತರ ಬಂದ ವಾಸುಕಿ ಕೌಶಿಕ್ ಮಯಾಂಕ್ ಅಗರ್ವಾಲ್‌ಗೆ ಜೊತೆಯಾದರು. ವೇಗವಾಗಿ ರನ್ ಗಳಿಸಲು ಆರಂಭಿಸಿದ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ಮೊತ್ತವನ್ನು 400 ರ ಗಡಿದಾಟಿಸಿದರು.

ಮಯಾಂಕ್ ಅಗರ್ವಾಲ್ ನಾಯಕನ ಆಟ
ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಕ್ಲಾಸ್ ಪ್ರದರ್ಶಿಸಿದ ಅವರು ಸುಧೀರ್ಘ ಅವಧಿಯವರೆಗೆ ಬ್ಯಾಟಿಂಗ್ ಮಾಡಿದರು. 529 ಬಾಲ್‌ಗಳನ್ನು ಎದುರಿಸಿದ ಮಯಾಂಕ್ 249 ರನ್ ಗಳಿಸಿ ಅಂತಿಮವಾಗಿ ರನೌಟ್ ಆದರು.
ಅವರ ಈ ಸ್ಮರಣೀಯ ಇನ್ನಿಂಗ್ಸ್‌ನಲ್ಲಿ 28 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್ ಸೇರಿದ್ದವು. ಕರ್ನಾಟಕ ಅಂತಿಮವಾಗಿ 407 ರನ್ ಗಳಿಸಿ ಆಲೌಟ್ ಆಯಿತು. ಚೇತನ್ ಸಕಾರಿಯಾ ಮತ್ತು ಕುಶಾಲ್ ಪಟೇಲ್ ತಲಾ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು.

ಸೌರಾಷ್ಟ್ರ ತಂಡಕ್ಕೆ ಕಾವೇರಪ್ಪ ಶಾಕ್
ಮೊದಲ ಇನ್ನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡಕ್ಕೆ ಕರ್ನಾಟಕ ವೇಗಿ ವಿಧ್ವತ್ ಕಾವೇರಪ್ಪ ಆರಂಭದಲ್ಲೇ ಆಘಾತ ನೀಡಿದರು. ಸ್ನೆಲ್ ಪಟೇಲ್ ಖಾತೆ ತೆರೆಯುವ ಮುನ್ನವೇ ಕಾವೇರಪ್ಪ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಮತ್ತೊಬ್ಬ ಪ್ರಮುಖ ಬ್ಯಾಟರ್ ವಿಶ್ವರಾಜ್ ಜಡೇಜಾ 22 ರನ್ ಗಳಿಸಿದ್ದಾಗ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು. 40 ರನ್‌ಗಳಾಗುವಷ್ಟರಲ್ಲಿ ಸೌರಾಷ್ಟ್ರ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಹಾರ್ವಿಕ್ ದೇಸಾಯಿ ಅಜೇಯ 27 ಮತ್ತು ಶೆಲ್ಡನ್ ಜಾಕ್ಸನ್ ಅಜೇಯ 27 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದು, ಮೂರನೇ ದಿನಕ್ಕೆ ವಿಕೆಟ್ ಕಾಪಾಡಿಕೊಂಡಿದ್ದಾರೆ. ಇನ್ನೂ 331 ರನ್‌ಗಳ ಹಿನ್ನಡೆಯಲ್ಲಿರುವ ಸೌರಾಷ್ಟ್ರ ಮೂರನೇ ದಿನ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೆ ಮಾತ್ರ ಸೋಲನ್ನು ತಪ್ಪಿಸಿಕೊಳ್ಳಲು ಸಾಧ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications