Ranji Trophy: ಮಯಾಂಕ್ ಪಡೆ ಸೇರಿದ ನಿಹಾಲ್: ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್‌ಗೆ ಕರ್ನಾಟಕ ಸಜ್ಜು

ಈ ಬಾರಿಯ ರಣಜಿ ಟ್ರೋಫಿ ಆವೃತ್ತಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಕರ್ನಾಟಕ ತಂಡಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಫೆಬ್ರವರಿ 8ರಿಂದ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಸಾಂಪ್ರದಾಯಿಕ ಎದುರಾಳಿ ಸೌರಾಷ್ಟ್ರ ವಿರುದ್ಧ ಸೆಣೆಸಲಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಮತ್ತು ಕೆಲವು ತಂಡಗಳ ನಡುವಿನ ಪಂದ್ಯಗಳನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಕರ್ನಾಟಕ-ಮುಂಬೈ, ಕರ್ನಾಟಕ-ದೆಹಲಿ, ಕರ್ನಾಟಕ-ತಮಿಳುನಾಡು ನಡುವಿನ ಪಂದ್ಯಗಳು ಹೆಚ್ಚು ಕುತೂಹಲಕಾರಿಯಾಗಿರುತ್ತವೆ.
ಆದರೆ, ಸೌರಾಷ್ಟ್ರ ವಿರುದ್ಧ ಕರ್ನಾಟಕ ತಂಡಕ್ಕೆ ಬೇರೆಯದೆ ಕಾರಣಕ್ಕೆ ಪ್ರಮುಖ ಎದುರಾಳಿ ಎನಿಸಿಕೊಂಡಿದೆ. 2019ರ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಸೌರಾಷ್ಟ್ರ ವಿರುದ್ಧ ಸೋಲನುಭವಿಸಿತ್ತು. ಸೌರಾಷ್ಟ್ರ ತಂಡದ ಪ್ರಮುಖ ಬ್ಯಾಟರ್ ಚೇತೇಶ್ವರ ಪೂಜಾರ ಕರ್ನಾಟಕದ ವಿನಯ್ ಕುಮಾರ್ ಬೌಲಿಂಗ್‌ನಲ್ಲಿ ಕೀಪರ್ ಗೆ ಕ್ಯಾಚ್ ನೀಡಿದ್ದರು. ಚೆಂಡು ಬ್ಯಾಟಿಗೆ ತಗುಲಿದ್ದು ಸ್ಪಷ್ಟವಾಗಿದ್ದರು ಅಂಪೈರ್ ಔಟ್ ನೀಡಲಿಲ್ಲ, ಪೂಜಾರ ಕೂಡ ಕ್ರೀಸ್ ಬಿಟ್ಟು ಕದಲಿಲ್ಲ.
ನಂತರ ಕರ್ನಾಟಕ ಆ ಪಂದ್ಯದಲ್ಲಿ ಸೋಲನುಭವಿಸಿತು. ಆದರೆ, ಕೆಟ್ಟ ಅಂಪೈರಿಂಗ್ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅಂದಿನಿಂದ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಬದ್ದ ಎದುರಾಳಿಯಾಗಿದೆ.

ಸೇಡು ತೀರಿಸಿಕೊಳ್ಳುತ್ತಾ?
2019ರ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಈ ಬಾರಿ ಕರ್ನಾಟಕ ತಂಡಕ್ಕೆ ಸಿಕ್ಕಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ತವರಿನ ಪರಿಸ್ಥಿತಿಯ ಲಾಭ ಪಡೆದರೆ ಸೌರಾಷ್ಟ್ರ ವಿರುದ್ಧ ಕರ್ನಾಟಕ ಹುಡುಗರು ಜಯಬೇರಿ ಸಾಧಿಸಬಹುದು.
ಈ ಬಾರಿಯ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಈವರೆಗೂ ಅಜೇಯವಾಗಿ ಉಳಿದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಬಲಿಷ್ಠ ಬ್ಯಾಟಿಂಗ್, ಬೌಲಿಂಗ್ ಪಡೆ
ಕರ್ನಾಟಕ ಈ ಬಾರಿ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲಿ ಉತ್ತಮವಾಗಿ ಆಡಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್‌ಗಳ ಜಯ ಗಳಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಮುರಳೀಧರ ವೆಂಕಟೇಶ್ ಪದಾರ್ಪಣಾ ಪಂದ್ಯದಲ್ಲೇ 5 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ. ಸೌರಾಷ್ಟ್ರ ವಿರುದ್ಧ ಕೂಡ ಅವರು ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ. ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಕ್ ಕೂಡ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದಾರೆ.
ತಂಡದಲ್ಲಿ ಅನುಭವಿ ಬ್ಯಾಟರ್ ಗಳ ದಂಡೇ ಇದೆ. ಮುಖ್ಯವಾಗಿ ಎಲ್ಲರೂ ಫಾರ್ಮ್‌ನಲ್ಲಿರುವುದು ಖುಷಿಯ ವಿಚಾರ. ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ನಿಕಿನ್ ಜೋಸ್, ಮನೀಶ್ ಪಾಂಡೆ ದೊಡ್ಡ ಮೊತ್ತ ಗಳಿಸಬೇಕಿದೆ. ಕಳೆದ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ ಶತಕ ಸಿಡಿಸಿರುವುದು ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ.

ಬಿಆರ್ ಶರತ್ ಬದಲಿಗೆ ನಿಹಾಲ್ ಉಲ್ಲಾಳ್ ಸೇರ್ಪಡೆ
ಸೆಮಿಫೈನಲ್ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್ ಕೀಪರ್ ಬಿಆರ್ ಶರತ್‌ರನ್ನು ತಂಡದಿಂದ ಹೊರಗಿಡಲಾಗಿದ್ದು, ನಿಹಾಲ್ ಉಲ್ಲಾಳ್‌ರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ತಂಡವನ್ನು ಪ್ರಕಟಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದೆ. ಆದರೂ ಆರಂಭದಲ್ಲಿ ವೇಗಿಗಳಿಗೆ ಸಹಾಯಕಾರಿಯಾಗಿದೆ. ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದರೆ ದೊಡ್ಡ ಮೊತ್ತ ಕಲೆಹಾಕಬಹುದಾಗಿದೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ್ (ಉಪನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಸಿದ್ದಾರ್ಥ್ ಕೆವಿ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಖ್, ಮುರಳೀಧರ ವೆಂಕಟೇಶ್, ಶುಭಾಂಗ್ ಹೆಗ್ಡೆ, ನಿಹಾಲ್ ಉಲ್ಲಾಳ್ (ವಿಕೆಟ್ ಕೀಪರ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications