Ranji Trophy: ಕರ್ನಾಟಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ, ಮೊದಲ ಇನ್ನಿಂಗ್ಸ್‌ನಲ್ಲಿ 129ಕ್ಕೆ ಆಲೌಟ್

ಬೆಂಗಳೂರಿನ ಆಲೂರು ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕದ ಬೌಲರ್ ಗಳು ಮಿಂಚಿದರು. ಟೆಸ್ಟ್‌ನ ಮೊದಲ ದಿನವೇ ರಾಜಸ್ಥಾನ 129 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದ ರಾಜಸ್ಥಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ರಾಜಸ್ಥಾನದ ಯಾವುದೇ ಬ್ಯಾಟರ್ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ಮಾಡಲಿಲ್ಲ. ಆರಂಭಿಕ ಆಟಗಾರ ಯಶ್ ಕೊಠಾರಿ ಶೂನ್ಯಕ್ಕೆ ಔಟಾಗುವ ಮೂಲಕ ರಾಜಸ್ಥಾನದ ಪತನ ಆರಂಭವಾಯಿತು. ನಂತರ ಬಂದ ಮಹಿಪಾಲ್ ಲೋಮ್ರರ್ ಕೂಡ ಶೂನ್ಯಕ್ಕೆ ಔಟಾಗುವ ಮೂಲಕ ರಾಜಸ್ಥಾನ ತಂಡದ ಮೇಲಿನ ಒತ್ತಡ ಹೆಚ್ಚಾಯಿತು.
ಕುನಾಲ್ ಸಿಂಗ್ ರಾಥೋರ್ ಮಾತ್ರ 33 ರನ್ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಕಾಪಾಡಲು ಯತ್ನಿಸಿದರು. ಆದರೂ ರಾಜಸ್ಥಾನ ಹೆಚ್ಚಿನ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ.
ಆದಿತ್ಯ ಗರ್ವಾಲ್ (19), ನಾಯಕ ಅಶೋಕ್ ಮೆನಾರಿಯಾ (12), ಕರಣ್ ಲಂಬಾ (31), ಜೋಷಿ (5), ಅರಾಫತ್ ಖಾನ್ (6), ಮನವ್ (0) ರನ್ ಗಳಿಸಿದರು. ಎಲ್ಲಾ ಬ್ಯಾಟರ್ ಗಳು ಕರ್ನಾಟಕದ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಅಂತಿಮವಾಗಿ ರಾಜಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 129 ರನ್‌ಗಳಿಗೆ ಆಲೌಟ್ ಆಯಿತು.

ಕರ್ನಾಟಕದ ಅತ್ಯುತ್ತಮ ಬೌಲಿಂಗ್
ಕರ್ನಾಟಕದ ವೇಗಿಗಳಾದ ವಿಧ್ವತ್ ಕಾವೇರಪ್ಪ, ವೈಶಾಕ್, ವಾಸುಕಿ ಕೌಶಿಕ್ ಅತ್ಯುತ್ತಮ ದಾಳಿ ಸಂಘಟಿಸಿದರು. ವಿಧ್ವತ್ ಕಾವೇರಪ್ಪ 2 ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಕ್ ಮತ್ತು ವಾಸುಕಿ ಕೌಶಿಕ್ ತಲಾ 4 ವಿಕೆಟ್ ಪಡೆದು, ರಾಜಸ್ಥಾನ ಬ್ಯಾಟಿಂಗ್ ಪಡೆಯನ್ನು ಕಂಗೆಡಿಸಿದರು.
ಕಳೆದ ಪಂದ್ಯದಲ್ಲಿ ಛತ್ತೀಸ್‌ಗಢದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕರ್ನಾಕಟ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಲೈಟ್ ಸಿ ಗುಂಪಿನಲ್ಲಿರುವ ಕರ್ನಾಟಕ 4 ಪಂದ್ಯಗಳಲ್ಲಿ 2 ಜಯ 2 ಡ್ರಾದೊಂದಿಗೆ 19 ಪಾಯಿಂಟ್ ಪಡೆದು ಮೊದಲನೇ ಸ್ಥಾನದಲ್ಲಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ತ್ ಪಡಿಕ್ಕಲ್, ಮನೀಶ್ ಪಾಂಡೆ, ಶ್ರೀನಿವಾಸ್ ಶರತ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ
ರಾಜಸ್ಥಾನ: ಯಶ್ ಕೊಠಾರಿ, ಕುನಾಲ್ ಸಿಂಗ್ ರಾಥೋಡ್, ಮಹಿಪಾಲ್ ಲೊಮ್ರೋರ್, ಮಾನವ್ ಸುತಾರ್, ಸಮರ್ಪಿತ್ ಜೋಶಿ, ಕರಣ್ ಲಂಬಾ, ಅರಾಫತ್ ಖಾನ್, ಅಶೋಕ್ ಮೆನಾರಿಯಾ (ನಾಯಕ), ರಿತುರಾಜ್ ಸಿಂಗ್, ಅನಿಕೇತ್ ಚೌಧರಿ, ಆದಿತ್ಯ ಗರ್ವಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications