Ranji Trophy 2022-23: ರಣಜಿ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೈದಾನಕ್ಕಿಳಿದ ಮಹಿಳಾ ಅಂಪೈರ್‌ಗಳು

ಡಿಸೆಂಬರ್ 13, 2022ರಂದು ರಣಜಿ ಟ್ರೋಫಿ 2022-23ರ ಋತುವು ಅಧಿಕೃತವಾಗಿ ಪ್ರಾರಂಭವಾಗಿದೆ. ಇದೀಗ ವೃಂದಾ ರಾಠಿ, ಜನನಿ ನಾರಾಯಣನ್ ಮತ್ತು ಗಾಯತ್ರಿ ವೇಣುಗೋಪಾಲನ್ ಎಂಬ ಮೂವರು ಮಹಿಳಾ ಅಂಪೈರ್‌ಗಳು ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯಗಳಲ್ಲಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿ ಇತಿಹಾಸ ಬರೆದಿದ್ದಾರೆ.
ಮಂಗಳವಾರ ಆರಂಭಗೊಂಡ 2022-23ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 5ನೇ ಸುತ್ತಿನಲ್ಲಿ ಮಹಿಳಾ ಅಂಪೈರ್‌ಗಳಾಗಿ ವೃಂದಾ ರಾಠಿ, ಜನನಿ ನಾರಾಯಣನ್ ಮತ್ತು ಗಾಯತ್ರಿ ವೇಣುಗೋಪಾಲನ್ ಮೈದಾನಕ್ಕಿಳಿದರು. ಈ ಮೂಲಕ ಕ್ರಿಕೆಟ್‌ನಲ್ಲಿ ಮೂವರು ಮಹಿಳಾ ಅಂಪೈರ್‌ಗಳು ಉನ್ನತ ಮಟ್ಟದ ಗೌರವಕ್ಕೆ ಪಾತ್ರರಾದರು.
ಜಾರ್ಖಂಡ್ ಮತ್ತು ಛತ್ತೀಸ್‌ಗಢ ನಡುವಿನ ಪಂದ್ಯದಲ್ಲಿ ಗಾಯತ್ರಿ ವೇಣುಗೋಪಾಲನ್ ಅಧಿಕೃತ ಅಂಪೈರ್ ಆಗಿದ್ದಾರೆ. ಜನನಿ ನಾರಾಯಣನ್ ಗೋವಾ ಮತ್ತು ಪಾಂಡಿಚೇರಿ ಪಂದ್ಯದಲ್ಲಿ ಮತ್ತು ರೈಲ್ವೇಸ್ ಮತ್ತು ತ್ರಿಪುರ ನಡುವಿನ ಪಂದ್ಯದಲ್ಲಿ ವೃಂದಾ ರಾಠಿ ಅವರು ಅಂಪೈರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಭಿನ್ನ ಹಿನ್ನೆಲೆಯಿಂದ ಬಂದ ಮತ್ತು ಈಗಾಗಲೇ ಮಹಿಳಾ ತಂಡಗಳಲ್ಲಿ ಹೆಸರುವಾಸಿಯಾಗಿದ್ದ ಮೂವರು ಮಹಿಳೆಯರು, ಬಿಸಿಸಿಐ ದೇಶೀಯ ಪುರುಷರ ಟೂರ್ನಿಗೆ ಮಹಿಳಾ ಅಂಪೈರ್‌ಗಳನ್ನು ಆಯ್ಕೆ ಮಾಡಿದಾಗ ಇತಿಹಾಸ ನಿರ್ಮಿಸಿದರು.
36 ವರ್ಷದ ಜನನಿ ನಾರಾಯಣನ್ ಅವರು ಕ್ರಿಕೆಟ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ದೊಡ್ಡ ಅಭಿಮಾನಿಯಾಗಿದ್ದರು. ಅವರು ಮೈದಾನದಲ್ಲಿ ಅಂಪೈರ್ ಆಗಲು ಅರ್ಜಿ ಸಲ್ಲಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಯನ್ನು ಎರಡು ಬಾರಿ ಸಂಪರ್ಕಿಸಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಯು ಮಹಿಳೆಯರಿಗೆ ಅಧಿಕೃತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವ ತನ್ನ ನೀತಿಯನ್ನು ತಿದ್ದುಪಡಿ ಮಾಡಿದ ಕೆಲವು ವರ್ಷಗಳ ನಂತರ, ಜನನಿ 2018ರಲ್ಲಿ ಬಿಸಿಸಿಐನ ಲೆವೆಲ್ 2 ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ನಂತರ ಜನನಿ ಅವರು ಅಂಪೈರಿಂಗ್ ಮುಂದುವರಿಸಲು ತನ್ನ ಆರಾಮದಾಯಕವಾದ ಐಟಿ ಕೆಲಸವನ್ನು ತ್ಯಜಿಸಲು ಯೋಚಿಸಲಿಲ್ಲ. ಜನನಿ ನಾರಾಯಣನ್ 2021ರಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್‌ಗೆ ರೆಫರಿಯಾಗಿ ಸೇವೆ ಸಲ್ಲಿಸಿದರು. ಮತ್ತೊಂದೆಡೆ 32 ವರ್ಷದ ವೃಂದಾ ರಾಠಿ ಮುಂಬೈನಿಂದ ಮಹಿಳಾ ಅಂಪೈರ್ ಆಗಿ ಹೊರಹೊಮ್ಮಿದ್ದಾರೆ.
ಬಿಸಿಸಿಐ ಅಂಕಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೊದಲು ವೃಂದಾ ಸ್ಥಳೀಯ ಪಂದ್ಯಗಳಲ್ಲಿ ಸ್ಕೋರ್ ಬೋರ್ಡ್ ನೋಡಿಕೊಳ್ಳುತ್ತಿದ್ದರು. 2013ರ ಮಹಿಳಾ ವಿಶ್ವಕಪ್‌ನಲ್ಲಿ ಬಿಸಿಸಿಐನ ಅಧಿಕೃತ ಸ್ಕೋರರ್ ಆಗಿ ಸೇವೆ ಸಲ್ಲಿಸಿದರು. ನಂತರ ಅಂಪೈರಿಂಗ್ ಕಡೆ ಗಮನ ಹರಿಸಿದರು.
ಅನುಭವಿ ಅಂಪೈರ್‌ಗಳ ಜೊತೆಗೆ ಜನನಿ ನಾರಾಯಣನ್ ಮತ್ತು ವೃಂದಾ ರಾಠಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಅಭಿವೃದ್ಧಿ ಅಧಿಕಾರಿಗಳ ಸಮಿತಿಯ ಭಾಗವಾಗಿದ್ದರು.
ಅನುಭವಿ ಅಂಪೈರ್ ಬೋಧಕ ಡೆನಿಸ್ ಬರ್ನ್ಸ್ ಮಾತನಾಡಿ, "ಜನನಿ ಮತ್ತು ವೃಂದಾ ಭಾರತೀಯ ಮಹಿಳಾ ಅಂಪೈರ್‌ಗಳ 'ಹೊಸ ಅಲೆ' ಎಂದು ನಾನು ನಂಬುತ್ತೇನೆ," ಎಂದು ಹೇಳಿದ್ದಾರೆ.
ದೆಹಲಿಯಲ್ಲಿರುವ 43 ವರ್ಷದ ಗಾಯತ್ರಿ ವೇಣುಗೋಪಾಲನ್ ಅವರು ಕ್ರಿಕೆಟ್ ಆಡುವ ಆಕಾಂಕ್ಷೆಯನ್ನು ಹೊಂದಿದ್ದರು. ಆದರೆ ಭುಜದ ಗಾಯವು ಆ ಕನಸುಗಳನ್ನು ಕಟ್ಟಿಹಾಕಿತು. ಬಿಸಿಸಿಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು 2019ರಲ್ಲಿ ಅಂಪೈರಿಂಗ್ ಮಾಡಲು ಪ್ರಾರಂಭಿಸಿದರು.
ಗಾಯತ್ರಿ ವೇಣುಗೋಪಾಲನ್ ಈಗಾಗಲೇ ರಣಜಿ ಟ್ರೋಫಿಯಲ್ಲಿ ನಾಲ್ಕನೇ ಸ್ಥಾನದ ಮೀಸಲು ಅಂಪೈರ್ ಆಗಿ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಈಗಾಗಲೇ ಪುರುಷರ ಕ್ರಿಕೆಟ್‌ನಲ್ಲಿ ಮಹಿಳಾ ಅಂಪೈರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬಿಸಿಸಿಐ ಮಹಿಳೆಯರಿಗೆ ಇನ್ನಷ್ಟು ಅವಕಾಶ ನೀಡಬೇಕಿದೆ ಮತ್ತು ಈವರಗೆ ಬಿಸಿಸಿಐನಲ್ಲಿ ನೋಂದಾಯಿಸಿರುವ 150 ಅಂಪೈರ್‌ಗಳ ಪೈಕಿ ಮೂವರು ಮಾತ್ರ ಮಹಿಳೆಯರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications