
ಪ್ರಸ್ತುತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ 46ನೇ ಪಂದ್ಯದಲ್ಲಿ ಅಫ್ಘನ್ ಸ್ಪಿನ್ನರ್ ರಶೀದ್ ಖಾನ್ ಮೋಡಿಗೆ ಬ್ರಿಸ್ಬೇನ್ ಹೀಟ್‌ನ 6 ಬ್ಯಾಟ್ಸ್‌ಮನ್‌ಗಳು ಔಟಾಗಿದ್ದಾರೆ. ಇವರಲ್ಲಿ ಐವರು ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವುದು ವಿಶೇಷ.
ಅಡಿಲೇಡ್ ಸ್ಟ್ರೈಕರ್ ನಿಗದಿತ 20 ಓವರ್‌ಗಳಲ್ಲಿ 161 ರನ್ ಕಲೆಹಾಕಿತು. ಈ ಗುರಿಯನ್ನ ಬೆನ್ನತ್ತಿದ ಬ್ರಿಸ್ಬೇನ್ ಹೀಟ್ , ರಶೀದ್ ಖಾನ್‌ರ ದಾಳಿಗೆ ಪತರುಗುಟ್ಟಿದೆ. 15 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಬ್ರಿಸ್ಬೇನ್ 90 ರನ್‌ಗೆ ಆಲೌಟ್ ಆಗಿದೆ.
ಕ್ರಿಸ್ ಲಿನ್ ನಾಯಕತ್ವದ ಬ್ರಿಸ್ಬೇನ್ ಹೀಟ್ 162ರನ್‌ಗಳ ಟಾರ್ಗೆಟ್ ಅನ್ನು ಸುಲಭವಾಗಿ ಬೆನ್ನತ್ತಬಹುದು ಎಂದು ಊಹಿಸಲಾಗಿತ್ತು. ಆದ್ರೆ ರಶೀದ್ ಖಾನ್ 9ನೇ ಓವರ್‌ನಲ್ಲಿ 2 ವಿಕೆಟ್ ಹಾಗೂ 15ನೇ ಓವರ್‌ನಲ್ಲಿ ಮತ್ತೆರಡು ವಿಕೆಟ್ ಉರುಳಿಸಿದ್ರು. ಈ ಮೂಲಕ ಒಟ್ಟು ನಾಲ್ಕು ಓವರ್‌ಗಳಲ್ಲಿ 17 ರನ್ ನೀಡಿ 6 ವಿಕೆಟ್ ಕಬಳಿಸಿದ ರಶೀದ್ ಖಾನ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶಿಸಿದ್ರು.
ಆರು ವಿಕೆಟ್ ಪಡೆಯವಲ್ಲಿ ಯಶಸ್ವಿಯಾದ ರಶೀದ್ ಖಾನ್ ಪಂದ್ಯದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಮಿಸ್ ಮಾಡಿಕೊಂಡಿದ್ದು ವಿಶೇಷ. 9ನೇ ಓವರ್‌ನ ಎರಡನೇ ಎಸೆತದಲ್ಲಿ ಹೆಜ್ಲೆಟ್ ಅವರನ್ನು ಔಟ್ ಮಾಡಿದರು. ಮುಂದಿನ ಎಸೆತದಲ್ಲಿ ಜಾಕ್ ಲೆಹ್ಮನ್ ಅವರ ವಿಕೆಟ್ ಪಡೆದರು. ನಂತರದ ಎಸೆತದಲ್ಲಿ ಹ್ಯಾಟ್ರಿಕ್ ಮಿಸ್ ಮಾಡಿಕೊಂಡ್ರು.
ಇದೇ ರೀತಿಯಲ್ಲಿ 15ನೇ ಓವರ್‌ನ ಎರಡನೇ ಎಸೆತದಲ್ಲಿ ಕುಹೆನ್‌ಮನ್ ಅವರನ್ನು ಔಟ್ ಮಾಡಿದರು. ಮೂರನೇ ಎಸೆತದಲ್ಲಿ ಮುಜೀಬ್ ಅವರ ವಿಕೆಟ್ ಉರುಳಿಸಿ ಐದು ವಿಕೆಟ್‌ಗಳನ್ನು ಪೂರೈಸಿದರು. ಈ ವೇಳೆ ಮತ್ತೊಮ್ಮೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವನ್ನ ಕೈ ಚೆಲ್ಲಿದರು.
ಅಂತಿಮವಾಗಿ ರಶೀದ್ ಖಾನ್ ಅವರ ಈ ಸ್ಪಿನ್ ಮೋಡಿಯಿಂದ ಬ್ರಿಸ್ಬೇನ್ ತಂಡವು 15 ಓವರ್‌ನಲ್ಲಿ ಕೇವಲ 90 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಅಡಿಲೇಡ್ ತಂಡವು 71 ರನ್‌ಗಳ ಜಯ ಸಾಧಿಸಿತು. 4 ಓವರ್‌ನಲ್ಲಿ 17 ನೀಡಿ 6 ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬೌಲಿಂಗ್ ಅಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚಿದ ರಶೀದ್ ಖಾನ್ 4 ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿ 13ರನ್ ಕಲೆಹಾಕಿದ್ರು. ಈ ಪಂದ್ಯದ ಗೆಲುವಿನೊಂದಿಗೆ ಅಡಿಲೇಡ್ ಸ್ಟ್ರೈಕರ್ ಪಾಯಿಂಟ್ಸ್ ಟೇಬಲ್‌ನಲ್ಲಿ ಒಟ್ಟು 17 ಪಾಯಿಂಟ್ಸ್‌ನೊಂದಿಗೆ ಐದನೇ ಸ್ಥಾನಕ್ಕೆ ಜಿಗಿದಿದೆ.