
ಕಾಬೂಲ್, ಜೂನ್ 3: ಅಫ್ಘಾನಿಸ್ತಾನದ ಆಲ್ ರೌಂಡರ್ ರಶೀದ್ ಖಾನ್ ವಿಶ್ವ ಖ್ಯಾತಿಯ ಆಟಗಾರ. ಮುಖ್ಯವಾಗಿ ಟಿ20 ಕ್ರಿಕೆಟ್ ಮಾದರಿಯಲ್ಲಿ ರಶೀದ್ ಹೆಚ್ಚು ಅಪಾಯಕಾರಿ ಬೌಲರ್ ಆಗಿ ಕಾಣಿಸಿಕೊಳ್ಳುತ್ತಾರೆ. ಐಪಿಎಲ್‌ನಲ್ಲಿ ಕೇವಲ 46 ಪಂದ್ಯಗಳಲ್ಲಿ 55 ವಿಕೆಟ್ ಉರುಳಿಸಿರುವ ರಶೀದ್, ಆಸ್ಟ್ರೇಲಿಯಾ ಕ್ರಿಕೆಟರ್ ಸ್ಟೀವ್ ಸ್ಮಿತ್ ಅವರ ಬ್ಯಾಟಿಂಗ್ ಶೈಲಿಯನ್ನು ನಕಲಿ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ಮಿನುಗುವಲ್ಲಿ ಪ್ರಮುಖ ಕಾರಣರಾಗಿರುವ ರಶೀದ್ ಖಾನ್, ಸ್ಟೀವ್ ಸ್ಮಿತ್ ಬ್ಯಾಟಿಂಗ್ ಶೈಲಿಯನ್ನು ಅನುಸರಿಸಿ ವೀಡಿಯೋ ಮಾಡಿದ್ದಾರೆ. ಈ ವೀಡಿಯೋವನ್ನು ಸನ್ ರೈಸರ್ಸ್ ಹೈದರಾಬಾದ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.
ಮಂಗಳವಾರ (ಜೂನ್ 2) 31ರ ಹರೆಯಕ್ಕೆ ಕಾಲಿರಿಸಿರುವ ಸ್ಮಿತ್, ತನ್ನ ವಿಭಿನ್ನ ಬ್ಯಾಟಿಂಗ್ ತಂತ್ರಗಾರಿಕೆಯಿಂದ ವಿಶ್ವದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿರುವ ಸ್ಮಿತ್ ನಂ.1 ಸ್ಥಾನ ಅಲಂಕರಿಸಿದ್ದಾರೆ.
ಅಂದ್ಹಾಗೆ, ಸ್ಮಿತ್ ಬರ್ತ್‌ಡೇ ದಿನದಂದೇ ರಶೀದ್ ಈ ವಿಶೇಷ ವೀಡಿಯೋವನ್ನು ಹರಿಯಬಿಟ್ಟಿದ್ದರು. ವೀಡಿಯೋ ಜೊತೆಗೆ, 'ಸ್ಟೀವ್ ಸ್ಮಿತ್ ಹುಟ್ಟು ಹಬ್ಬದ ಈ ದಿನ ಅವರ ಬೆಸ್ಟ್ ಬ್ಯಾಟಿಂಗ್ ಶೈಲಿ ತೋರಿಸುತ್ತಿರುವ ರಶೀದ್ ಖಾನ್. ಒಳ್ಳೆಯ ಬ್ಯಾಟಿಂಗ್ ಶೈಲಿ ಸ್ಟೀವ್ ಸ್ಮಿತ್' ಎಂದು ಸನ್ ರೈಸರ್ಸ್ ಹೈದರಾಬಾದ್ ಬರೆದುಕೊಂಡಿದೆ.