ಕೋಚ್ ಹುದ್ದೆಗೆ 10 ಜನ ಫೈನಲ್, ರವಿಶಾಸ್ತ್ರಿ ರೇಸಿನಲ್ಲಿ ಮುಂದೆǃ
ಬೆಂಗಳೂರು, ಜುಲೈ 09: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮುಂದೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಈ ದೀರ್ಘ ಪ್ರವಾಸಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಹೊಸ ಕೋಚ್ ಆಯ್ಕೆಯಾಗುವ ನಿರೀಕ್ಷೆಯಿದೆ. ಜುಲೈ 10ರಂದು ಕೋಚ್ ಆಯ್ಕೆ ಬಗ್ಗೆ ಮಹತ್ವದ ಸಭೆಯನ್ನು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ನಡೆಸಲಿದೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ 10 ಮಂದಿಯ ಅರ್ಜಿಯನ್ನು ಅಂತಿಮಗೊಳಿಸಲಾಗಿದ್ದು, ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರ ಹೆಸರು ಮುಂಚೂಣಿಯಲ್ಲಿದೆ.
ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್, ಲ್ಯಾನ್ಸ್ ಕ್ಲುಸ್ನರ್, ರಾಕೇಶ್ ಶರ್ಮ(ಒಮಾನ್ ತಂಡದ ಕೋಚ್), ಫಿಲ್ ಸಿಮನ್ಸ್ ಹಾಗೂ ಉಪೇಂದ್ರ ಬ್ರಹ್ಮಚಾರಿ(ಕ್ರಿಕೆಟ್ ಹಿನ್ನಲೆಯಿಲ್ಲದ ಇಂಜಿನಿಯರ್)

2014ರಿಂದ 2016ರ ಅವಧಿಯಲ್ಲಿ ಶಾಸ್ತ್ರಿ, ಟೀಂ ಇಂಡಿಯಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಿರಾಟ್ ಕೊಹ್ಲಿಗೆ ಹೆಚ್ಚು ಆಪ್ತರಾಗಿರುವ ಕಾರಣದಿಂದ ಈ ಬಾರಿ ಕೋಚ್ ಹುದ್ದೆಯ ಆಯ್ಕೆಯಲ್ಲಿ ಉಂಟಾಗಿರುವ ತುರುಸಿನ ಸ್ಪರ್ಧೆಯಲ್ಲಿ ಮಿಕ್ಕೆಲ್ಲಾ ಅಭ್ಯರ್ಥಿಗಳಿಂದ ಮಂಚೂಣಿಯಲ್ಲಿದ್ದಾರೆಂದು ಹೇಳಲಾಗಿದೆ.
ಜುಲೈ 10ರಂದು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಎದುರು ಸಂದರ್ಶನಕ್ಕೆ ಆರು ಮಂದಿ ಹಾಜರಾಗಲಿದ್ದಾರೆ ಎಂಬ ಮಾಹಿತಿ ಬಂದಿದೆ.
ರವಿಶಾಸ್ತ್ರಿ, ಸೆಹ್ವಾಗ್, ಮೂಡಿ, ಸಿಮನ್ಸ್, ಪೈಬಸ್ ಹಾಗೂ ರಜಪೂತ್ ಅವರು ಮೊದಲ ಹಂತದಲ್ಲಿ ಸಂದರ್ಶನ ನಡೆಸುವ ಸಾಧ್ಯತೆಯಿದೆ. ಕ್ಲುಸ್ನೆರ್, ಗಣೇಶ್ ಅವರ ಸಂದರ್ಶನ ನಂತರ ನಡೆಸಬಹುದು ಅಥವಾ ಸಂದರ್ಶನ ನಡೆಸದೆ ಹೊಸ ಕೋಚ್ ಆಯ್ಕೆ ಘೋಷಿಸಬಹುದು ಎಂಬ ಸುದ್ದಿಯೂ ಇದೆ.
ರವಿಶಾಸ್ತ್ರಿ ಅವರು ಕೋಚ್ ಆಗುವುದು ಬಹುತೇಕ ನಿಶ್ಚಿತವಾಗಿದ್ದು, ಘೋಷಣೆ ಮಾತ್ರ ಬಾಕಿ ಇದೆ ಎನ್ನಲಾಗಿದೆ. ಕ್ರಿಕೆಟ್ ಸಲಹಾ ಸಮಿತಿಯಲ್ಲಿರುವ ಸೌರವ್ ಗಂಗೂಲಿ ಮಾತ್ರ ರವಿಶಾಸ್ತ್ರಿ ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications