ಟೀಮ್ ಇಂಡಿಯಾದ ಅನುಭವಿ ಬೌಲರ್ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಭಾರತದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೇ ಈ ಸಾಧನೆ ಮಾಡಿ ಬೀಗಿದ್ದಾರೆ ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್.
ಅಂದಹಾಗೆ ವೆಸ್ಟ್ ಇಂಡಿಸ್ ವಿರುದ್ಧ ಈ ಪಂದ್ಯದ ಆರಂಭಕ್ಕೂ ಮುನ್ನ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದ ಸಾಧನೆಗಾಗಿ ಮೂರು ವಿಕೆಟ್‌ಗಳಷ್ಟು ಹಿಂದಿದ್ದರು. ಇದನ್ನು ಅಶ್ವಿನ್ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೇ ಮಾಡಿದ್ದು ಭಾರತದ ಪರವಾಗಿ ಈ ಸಾಧನೆ ಮಾಡಿದ ಕೇವಲ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 5 ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದು ಒಟ್ಟು 271ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 702 ವಿಕೆಟ್‌ಗಳನ್ನು ಪಡೆದುಕೊಂಡಂತಾಗಿದೆ. ಇನ್ನು ಈ ಪಂದ್ಯದಲ್ಲಿ 5 ವಿಕೆಟ್‌ಗಳ ಗೊಂಚಲು ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 33ನೇ ಬಾರಿಗೆ ಐದು ವಿಕೆಟ್‌ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.
ಇನ್ನು ಭಾರತದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಕೇವಲ ಇಬ್ಬರು ಕ್ರಿಕೆಟಿಗರು ಮಾತ್ರವೇ 700ಕ್ಕೂ ಅಧಿಕ ವಿಕೆಟ್‌ಗಳ ಸಾಧನೆ ಮಾಡಿದ್ದರು. ಭಾರತದ ಕ್ರಿಕೆಟ್‌ನ ದಿಗ್ಗಜ ಬೌಲರ್‌ಗಳಾದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅಶ್ವಿನ್‌ಗೂ ಮುನ್ನ ಸಾಧನೆಯನ್ನು ಮಾಡಿರುವ ಇಬ್ಬರು ಕ್ರಿಕೆಟಿಗರು.
ಇನ್ನು ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇತಿಹಾಸದಲ್ಲಿ 700 ವಿಕೆಟ್‌ಗಳ ಮೈಲಿಗಲ್ಲು ದಾಟಿದ ಕೇವಲ 16ನೇ ಬೌಲರ್ ಎನಿಸಿಕೊಂಡಿರುವ ಅಶ್ವಿನ್ ಸ್ಪಿನ್ನರ್‌ಗಳ ಪೈಕಿ ಈ ಸಾಧನೆ ಮಾಡಿದ 6ನೇ ಬೌಲರ್ ಎನಿಸಿಕೊಂಡಿದ್ದಾರೆ. ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 956 ವಿಕೆಟ್‌ಗಳನ್ನು ಪಡೆದುಕೊಂಡಿದ್ದರೆ ಹರ್ಭಜನ್ ಸಿಂಗ್ 711 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

ಚೆನ್ನೈ ಮೂಲದ 36ರ ಹರೆಯದ ಆರ್ ಅಶ್ವಿನ್ ಈವರೆಗೆ 93 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು ಇದರಲ್ಲಿ 479 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 113 ಏಕದಿನ ಪಂದ್ಯಗಳನ್ನಾಡಿರುವ ಅಶ್ವಿನ್ 151 ವಿಕೆಟ್‌ಗಳನ್ನು ಪಡೆದುಕೊಂಡಿದ್ದು 65 ಟಿ20 ಪಂದ್ಯಗಳನ್ನು ಆಡಿ 72 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.
700 ವಿಕೆಟ್‌ಗಳ ಮೈಲಿಗಲ್ಲು ದಾಟಿರುವ ಆರ್ ಅಶ್ವಿನ್ ಮುಂದೆ ಇದೀಗ ಮತ್ತೊಂದು ಸಾಧನೆಗೆ ಅವಕಾಶವಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹರಭಜನ್ ಸಿಂಗ್ ಅವರ ಅಂತಾರಾಷ್ಟ್ರೀಯ ವಿಕೆಟ್‌ಗಳ ಸಾಧನೆಯನ್ನು ಹಿಂದಿಕ್ಕುವ ಅವಕಾಶ ಅಶ್ವಿನ್‌ಗೆ ಇದೆ. ಇದಕ್ಕಾಗಿ ಅಶ್ವಿನ್ ಇನ್ನೂ 10 ವಿಕೆಟ್‌ಗಳನ್ನು ಪಡೆಯುವ ಅಗತ್ಯವಿದೆ. ಕೇವಲ ಎರಡು ಟೆಸ್ಟ್ ಪಂದ್ಯಗಳ ಸರಣಿ ಇದಾಗಿರುವ ಕಾರಣ ಇದು ಕಷ್ಟವಾಗಿದ್ದರೂ ಮೊದಲ ಇನ್ನಿಂಗ್ಸ್‌ನಲ್ಲಿಯೇ ಅಶ್ವಿನ್ 5 ವಿಕೆಟ್‌ಗಳನ್ನು ಪಡೆದುಕೊಂಡಿರುವ ಕಾರಣ ಆ ಅವಕಾಶ ತೆರೆದಿದೆ.
ಇನ್ನು ಡೊಮೆನಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದೆ. ಆದರೆ ಆರ್ ಅಶ್ವಿನ್ ಅವರ ಸ್ಪಿನ್ ದಾಳಿಗೆ ವೆಸ್ಟ್ ಇಂಡೀಸ್ ದಾಂಡಿಗರು ಪರದಾಡಿದ್ದು ಕ್ರೀಸ್‌ನಲ್ಲಿ ಹೆಚ್ಚು ಕಾಲ ನಿಲ್ಲಲು ವಿಫಲವಾದರು. ಮೊದಲ ಪಂದ್ಯವನ್ನಾಡುತ್ತಿರುವ ಅಲಿಕ್ ಅತನಾಜೆ ಮಾತ್ರವೇ 47 ರನ್‌ಗಳ ಕೊಡುಗೆ ನೀಡುವ ಮೂಲಕ ಕೆಲ ಕಾಲ ಹೋರಾಟ ನಡೆಸಿದ್ದು ಹೊರತುಪಡಿಸಿದರೆ ಉಳಿದೆಲ್ಲಾ ಆಟಗಾರರು ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ಹೀಗಾಗಿ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳನ್ನು ಮಾತ್ರವೇ ಗಳಿಸಿದ್ದು ಆಲೌಟ್ ಆಗಿದೆ.