ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಬಹು ನಿರೀಕ್ಷಿತ 2024ರ ಐಪಿಎಲ್ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡಗಳನ್ನು ನಿರ್ಮಿಸಿಕೊಳ್ಳಲು ಪ್ರಯತ್ನಿಸಿದವು. ತೀವ್ರ ಬಿಡ್ಡಿಂಗ್ ಯುದ್ಧದ ನಂತರ, 30 ಸಾಗರೋತ್ತರ ಆಟಗಾರರು ಸೇರಿದಂತೆ ಒಟ್ಟು 72 ಆಟಗಾರರು 230.45 ಕೋಟಿ ರೂಪಾಯಿಗೆ ಖರೀದಿಯಾದರು.
ಇನ್ನು 23.25 ಕೋಟಿ ರೂಪಾಯಿ ಪರ್ಸ್‌ನೊಂದಿಗೆ ಬಿಡ್ಡಿಂಗ್ ವಾರ್‌ಗೆ ಧುಮುಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಅಭಿಮಾನಿಗಳು ಉಗಿದು ಉಪ್ಪಿನಕಾಯಿ ಅರೆಯುತ್ತಿದ್ದಾರೆ. ಏಕೆಂದರೆ ಹರಾಜಿನಲ್ಲಿ ನಿರೀಕ್ಷಿಸಿದ್ದೇ ಬೇರೆ, ಆರಿಸಿಕೊಂಡಿದ್ದೇ ಬೇರೆ ಎನ್ನುವಂತಾಗಿದೆ.

ಮಿನಿ ಹರಾಜಿನಲ್ಲಿ ಆಟಗಾರರನ್ನು ಆಯ್ಕೆ ಮಾಡಿದ ರೀತಿಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಅಪ್ಪಟ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹರಾಜಿಗೂ ಮುನ್ನ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದ್ದರಿಂದ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಪ್ರಮುಖ ಬೌಲರ್‌ಗಳನ್ನು ಖರೀದಿ ಮಾಡುವುದು ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನ ಉದ್ದೇಶವಾಗಿತ್ತು. ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು, ಬೌಲಿಂಗ್ ವಿಭಾಗವನ್ನು ಬಲಪಡಿಸಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಬ್ಯಾಟರ್‌ಗಳಿಗೆ ತಕ್ಕಂತೆ ಬೌಲರ್‌ಗಳನ್ನು ಆಯ್ಕೆ ಮಾಡಿಲ್ಲ ಎನ್ನುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಟ್ಟಾ ಬೆಂಬಲಿಗ ದೊಡ್ಡ ಗಣೇಶ್ 2024ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡದ ಆಯ್ಕೆಗಳ ಬಗ್ಗೆ ಬೇಸರಗೊಂಡಿದ್ದಾರೆ. ಆರ್‌ಸಿಬಿ ತಂಡದಲ್ಲಿನ ವ್ಯತ್ಯಾಸಗಳ ಬಗ್ಗೆ ಫ್ರಾಂಚೈಸಿ ಗಮನ ಹರಿಸಲಿಲ್ಲ ಎಂದು ಕರ್ನಾಟಕ ಮಾಜಿ ವೇಗಿ ದೊಡ್ಡ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

ಉಳಿಸಿಕೊಂಡ ಆಟಗಾರರನ್ನು ಘೋಷಿಸಿದ ನಂತರ, ಆರ್‌ಸಿಬಿ ಇತರ ತಂಡಗಳಂತೆ, ತಮ್ಮ ತಂಡವನ್ನು ಪೂರ್ಣಗೊಳಿಸಲು ಕೆಲವು ಕ್ಷೇತ್ರಗಳನ್ನು ಹೊಂದಿತ್ತು. ಅದರಲ್ಲಿ ಕ್ಯಾಮೆರಾನ್ ಗ್ರೀನ್ ಅವರನ್ನು 17.50 ಕೋಟಿ ರೂಪಾಯಿಗೆ ಪಡೆದ ನಂತರ, ತಮ್ಮ ಲಭ್ಯವಿರುವ ಪರ್ಸ್ ಅನ್ನು ಅರ್ಧದಷ್ಟು ಕಡಿಮೆಗೊಳಿಸಿದರು.
ಭಾವೋದ್ರಿಕ್ತ ಆರ್‌ಸಿಬಿ ಅಭಿಮಾನಿಗಳು ಹರಾಜಿನಲ್ಲಿ ಕುಳಿತುಕೊಂಡಿದ್ದರೆ, ಟೀಮ್ ಮ್ಯಾನೇಜ್‌ಮೆಂಟ್‌ಗಿಂತ ಬಲಿಷ್ಠ ತಂಡವನ್ನು ಕಟ್ಟುತ್ತಿದ್ದರು ಎಂದು ದೊಡ್ಡ ಗಣೇಶ್ ಹೇಳಿದ್ದಾರೆ. ಈ ಕುರಿತು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಆರ್‌ಸಿಬಿ ಅಭಿಮಾನಿಗಳಿಗೆ ಪರ್ಸ್‌ನಿಂದ ಅರ್ಧದಷ್ಟು ಹಣವನ್ನು ಮತ್ತು ಹರಾಜು ಟೇಬಲ್‌ನಲ್ಲಿ ಫ್ರೀ ಹ್ಯಾಂಡ್ ನೀಡಿದ್ದರೆ ಸಾಕಿತ್ತು. ನಾನು ನಿಮಗೆ ಚಾಲೆಂಜ್ ಮಾಡುತ್ತೇನೆ, ನಮ್ಮ ಅಭಿಮಾನಿಗಳು ಬಲಿಷ್ಠ ಮತ್ತು ಸಮತೋಲಿತ ತಂಡವನ್ನು ಆಯ್ಕೆ ಮಾಡುತ್ತಿದ್ದರು. ಇನ್ನೂ ಸ್ವಲ್ಪ ಹಣವನ್ನು ಉಳಿಸಿಕೊಡುತ್ತಿದ್ದರು. ಯಾವುದೇ ಲೀಗ್ ಕ್ರಿಕೆಟ್ ತಂಡವು ಅಂತಹ ಪ್ರಾಥಮಿಕ ತಪ್ಪುಗಳನ್ನು ಮಾಡಬಹುದು ಎಂದು ನಂಬಲು ಸಾಧ್ಯವಿಲ್ಲ," ಎಂದು ಬರೆದುಕೊಂಡಿದ್ದಾರೆ.
ಪ್ರತಿ ಬಾರಿ ಆರ್‌ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಆಟಗಾರರನ್ನು ಬಿಡ್ ಮಾಡುವಾಗ ತಪ್ಪು ಮಾಡುತ್ತದೆ. ಅದು ಈ ಬಾರಿಯೂ ಮುಂದುವರೆದಿದೆ. ಪರ್ಸ್‌ನಲ್ಲಿ ದೊಡ್ಡ ಹಣವಿದ್ದರೂ ಗುಣಮಟ್ಟದ ಆಟಗಾರರನ್ನು ಪಡೆಯುವಲ್ಲಿ ವಿಫಲವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 20.50 ಕೋಟಿ ರೂಪಾಯಿಗೆ ಖರೀದಿಯಾದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಕಳೆದುಕೊಂಡ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಸೆಳೆದುಕೊಂಡಿತು.
1 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಬಂದ ಅಲ್ಜಾರಿ ಜೋಸೆಫ್ ಅವರನ್ನು ಖರೀದಿಸಲು ಆರ್‌ಸಿಬಿ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಕಿಂಗ್ಸ್ ನಡುವಿನ ಬಿಡ್ಡಿಂಗ್ ವಾರ್‌ನಲ್ಲಿ ಭಾಗಿಯಾಗಿದ್ದರು.
ಅಂತಿಮವಾಗಿ ಆರ್‌ಸಿಬಿ 11.5 ಕೋಟಿ ರೂಪಾಯಿ ವ್ಯಯಿಸಿ ಅಲ್ಜಾರಿ ಜೋಸೆಫ್‌ರನ್ನು ಪಡೆಯಿತು. ಇನ್ನು ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್ ಬಿಡುಗಡೆ ಮಾಡಿದ ಯಶ್ ದಯಾಳ್ ಅವರನ್ನು 5 ಕೋಟಿ ರೂಪಾಯಿಗೆ ಖರೀದಿಸಿತು.
ಅಲ್ಲದೆ, ಈ ಬಾರಿಯ ಹರಾಜಿನಲ್ಲಿ 1.5 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಟಾಮ್ ಕರ್ರಾನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೇ ಮೊತ್ತಕ್ಕೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.
ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಅವರನ್ನು 2 ಕೋಟಿ ರೂಪಾಯಿಗೆ ಸಹಿ ಹಾಕುವ ಮೂಲಕ ಕೊನೆಯಲ್ಲಿ ಒಂದೆರಡು ವೇಗದ ಬೌಲರ್‌ಗಳನ್ನು ಪಡೆದುಕೊಂಡಿತು.