ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಆರ್‌ಸಿಬಿಗೆ ಬುಧವಾರ ಆಘಾತಕಾದಿತ್ತು. ಕೋಲ್ಕತ್ತಾದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಮತ್ತು ಚೆನ್ನೈನಲ್ಲಿ 17 ವರ್ಷಗಳ ನಂತರ ಸಿಎಸ್‌ಕೆ ತಂಡವನ್ನು ಸೋಲಿಸಿದ್ದ ಆರ್‌ಸಿಬಿ, ಐಪಿಎಲ್‌ನ 18 ನೇ ಆವೃತ್ತಿಯಲ್ಲಿ ಮೊದಲ ಸೋಲು ಕಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಆರ್‌ಸಿಬಿಯ ಹ್ಯಾಟ್ರಿಕ್ ಗೆಲುವಿನ ಆಸೆಗೆ ಬ್ರೇಕ್ ಹಾಕಿದೆ. ಬೆಂಗಳೂರು ತಂಡದ ಸೋಲಿಗೆ ಮಾಜಿ ಆರ್‌ಸಿಬಿ ಆಟಗಾರ ಮೊಹಮ್ಮದ್ ಸಿರಾಜ್ ಪ್ರಮುಖ ಕಾರಣ.
ಬುಧವಾರ ಆರ್‌ಸಿಬಿಯ ಸತತ ಗೆಲುವಿನ ಸರಣಿ ಬ್ರೇಕ್ ಬಿದ್ದಿದೆ. ಏಪ್ರಿಲ್ 2 ರಂದು ಆತಿಥೇಯ ತಂಡದ ಬೌಲಿಂಗ್ ಖಂಡಿತವಾಗಿಯೂ ಪರೀಕ್ಷೆಗೆ ಒಳಪಟ್ಟಿತು. ಈ ಬಾರಿ ಸ್ಟಾರ್ ಬೌಲರ್‌ಗಳು ಬಿಗುವಿನ ದಾಳಿ ಸಂಘಟಿಸುವಲ್ಲಿ ವಿಫಲರಾದರು. ಇದರೊಂದಿಗೆ, ಆರ್‌ಸಿಬಿಯ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತರೂ, ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಜಿಟಿ 17.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಸೋತ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನಕ್ಕೆ ಕುಸಿದಿದೆ.

ಪವರ್ ಪ್ಲೇನಲ್ಲಿ ಅದ್ಭುತ ಆಟ ಆಡಬೇಕಿದ್ದ ಆರ್‌ಸಿಬಿ ಬ್ಯಾಟರ್‌ಗಳು ಎಡವಿದ್ದಾರೆ. ಆರ್‌ಸಿಬಿ ತಂಡ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದ ವೇಗಿ ಮೊಹಮ್ಮದ್ ಸಿರಾಜ್, ಬುಧವಾರ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ್ದಾರೆ. ಪವರ್ ಪ್ಲೇನಲ್ಲಿ ಬಿಗಿಯಾದ ದಾಳಿಯೊಂದಿಗೆ ಸಿರಾಜ್ ಮಿಂಚಿದರು. ಈ ಅವಧಿಯಲ್ಲಿ ಸಿರಾಜ್ 3 ಓವರ್‌ಗಳನ್ನು ಬೌಲಿಂಗ್ ಮಾಡಿ 2 ಅಮೂಲ್ಯ ವಿಕೆಟ್‌ಗಳನ್ನು ಪಡೆದರು. ರಜತ್ ಪಾಟಿದಾರ್ ತಂಡವು ಸಿರಾಜ್ ಅವರ ಶಿಸ್ತಿನ ದಾಳಿಯನ್ನು ಎದುರಿಸಲು ವಿಫಲವಾಯಿತು. ತಮ್ಮ ಹಳೆಯ ತಂಡದ ವಿರುದ್ಧ ಅದ್ಭುತ ಸ್ಪೆಲ್ ಮಾಡಿದ ಸಿರಾಜ್, ತಮ್ಮನ್ನು ಬಿಟ್ಟುಕೊಟ್ಟ ನಿರ್ಧಾರ ಸರಿಯಲ್ಲ ಎಂದು ತೋರಿಸಿದರು.
ಸಿರಾಜ್ ಸತತವಾಗಿ ವಿಕೆಟ್ ಟು ವಿಕೆಟ್ ಬೌಲಿಂಗ್ ನಡೆಸಿದರು. ಇವರ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ಸಂಪೂರ್ಣ ವಿಫಲರಾದರು. ಮೊದಲು, ಸಿರಾಜ್ ದೇವದತ್ ಪಡಿಕ್ಕಲ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರೆ, ನಂತರ ಫಿಲ್ ಸಾಲ್ಟ್ ಅವರನ್ನು ಅದೇ ರೀತಿಯಲ್ಲಿ ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಸಿರಾಜ್ ತಮ್ಮ ಮೊದಲ ಓವರ್‌ನಲ್ಲಿ 6 ರನ್ ಮತ್ತು ಎರಡನೇ ಓವರ್‌ನಲ್ಲಿ 1 ರನ್ ನೀಡಿ, 1 ವಿಕೆಟ್ ಪಡೆದರು. ತಮ್ಮ ಮೂರನೇ ಓವರ್‌ನಲ್ಲಿ ಸ್ವಲ್ಪ ದುಬಾರಿಯಾಗಿದ್ದ ಸಿರಾಜ್, 8 ರನ್ ನೀಡಿ ಮತ್ತೊಂದು ವಿಕೆಟ್ ಪಡೆದರು. ಆರ್‌ಸಿಬಿ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ ವಿಫಲರಾದರು.
ತವರಿನ ಅಂಗಳದಲ್ಲಿ ಮೊದಲ ಪಂದ್ಯ ಆಡುತ್ತಿದ್ದ ಬೆಂಗಳೂರು ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ಬಾರಿ ಅವರು ರನ್ ರೇಟ್ ಹೆಚ್ಚಿಸಲು ಮೈದಾನಕ್ಕೆ ಇಳಿದು ವಿಕೆಟ್ ನೀಡುತ್ತಲೇ ಸಾಗಿದರು. ಪರಿಣಾಮವಾಗಿ, ಬೆಂಗಳೂರು ತಂಡವು ಮೊದಲ ಪವರ್ ಪ್ಲೇನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಕೂಡ ತಂಡವನ್ನು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಿಟ್ಟು ಪೆವಿಲಿಯನ್ ಸೇರಿದರು. ಪರಿಣಾಮವಾಗಿ, ಬೆಂಗಳೂರು ತಂಡ ಒತ್ತಡಕ್ಕೆ ಒಳಗಾಗಿ, ಪವರ್ ಪ್ಲೇನಲ್ಲಿ ರನ್‌ಗಳನ್ನು ಕಲೆ ಹಾಕುವಲ್ಲಿ ವಿಫಲವಾಗಿದ್ದೇ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಯಿತು.

170 ರನ್‌ಗಳ ಗುರಿ ನೀಡಿದಾಗ, ಆರ್‌ಸಿಬಿ ಬೌಲರ್‌ಗಳು ಬಿಗುವಿನ ಬೌಲಿಂಗ್ ಮಾಡಲಿಲ್ಲ. ವಿಕೆಟ್-ಟು-ವಿಕೆಟ್ ಬೌಲಿಂಗ್ ಮಾಡದೇ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಪವರ್ ಪ್ಲೇನಲ್ಲಿ ವಿಕೆಟ್ ಬೇಟೆಯಾಡುತ್ತಿದ್ದ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಬುಧವಾರ ಲಯ ಕಂಡುಕೊಳ್ಳಲು ಪರದಾಟ ನಡೆಸಿದರು. ಈ ಅವಧಿಯಲ್ಲಿ ಭುವಿ ಒಂದು ವಿಕೆಟ್ ಪಡೆದರು. ಆದರೆ ಗುಜರಾತ್ ತಂಡಕ್ಕೆ ದೊಡ್ಡ ಹೊಡೆತ ನೀಡುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಒಂದು ವಿಕೆಟ್ ಬಿದ್ದರೂ ಜಿಟಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಗೆದ್ದಿತು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದ ನಿರ್ಧಾರವೆಂದರೆ ಇಂಪ್ಯಾಕ್ಟ್ ಆಟಗಾರನ ಆಯ್ಕೆ. ಸಾಮಾನ್ಯವಾಗಿ, ಈ ಸಮಯದಲ್ಲಿ ಆರ್‌ಸಿಬಿ ಸುಯೇಶ್ ಶರ್ಮಾ ಅಥವಾ ಇನ್ನೊಬ್ಬ ಸ್ಪಿನ್ ಬೌಲರ್‌ಗೆ ಮಣೆ ಹಾಕುತ್ತಿತ್ತು. ಆದರೆ ಬುಧವಾರ ಯಾವ ಲೆಕ್ಕಾಚಾರ ಮಾಡಿ ರಸಿಕ್ ಸಲಾಂಗೆ ತಂಡದಲ್ಲಿ ಅವಕಾಶ ನೀಡಿತೋ ಎಂಬುದು ತಿಳಿಯಲಿಲ್ಲ. ಗುಜರಾತ್ ವಿರುದ್ಧ 3 ಓವರ್ ಬೌಲಿಂಗ್ ಮಾಡಿದ ನಂತರ ರಸಿಕ್ 35 ರನ್ ನೀಡಿದರು. ಪರಿಣಾಮವಾಗಿ, ಬೆಂಗಳೂರು ತಂಡವು ದೊಡ್ಡ ಹೊಡೆತವನ್ನು ಅನುಭವಿಸಿತು.
ಆರ್‌ಸಿಬಿ ತಂಡ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಬೇಟೆಯಾಡುವಲ್ಲಿ ವಿಫಲವಾಯಿತು. ಈ ವೇಳೆ ರನ್‌ಗಳಿಗೆ ಕಡಿವಾಣ ಹಾಕಬೇಕಿದ್ದ ಆರ್‌ಸಿಬಿ ಬೌಲರ್ಸ್ ರನ್‌ಗಳನ್ನು ನೀಡಿದರು. 11 ರಿಂದ 16 ಓವರ್‌ಗಳಲ್ಲಿ ಆರ್‌ಸಿಬಿ 59 ನೀಡಿ 1 ವಿಕೆಟ್ ಪಡೆಯಿತು. ಈ ಅವಧಿಯಲ್ಲಿ ತಂಡದ ಯಾವುದೇ ಬೌಲರ್ ಶಿಸ್ತುಬದ್ಧ ದಾಳಿ ನಡೆಸಲಿಲ್ಲ. ಪರಿಣಾಮವಾಗಿ ಗುಜರಾತ್ ಗೆದ್ದಿತು.
11ನೇ ಓವರ್, ಯಶ್ ದಯಾಳ್, 6 ರನ್
12ನೇ ಓವರ್, ಕೃನಾಲ್ ಪಾಂಡ್ಯ, 17 ರನ್
13ನೇ ಓವರ್, ಹ್ಯಾಜಲ್‌ವುಡ್, 6 ರನ್, 1 ವಿಕೆಟ್
14ನೇ ಓವರ್, ಕೃನಾಲ್ ಪಾಂಡ್ಯ, 11 ರನ್
15ನೇ ಓವರ್, ಲಿವಿಂಗ್‌ಸ್ಟೋನ್, 12 ರನ್
16ನೇ ಓವರ್ ರಸಿಕ್, 7 ರನ್