RCB vs CSK: ಕೈ ಜಾರಿದ್ದ ಪಂದ್ಯ ಆರ್‌ಸಿಬಿ ಕಡೆಗೆ ತಿರುಗಿಸಿದ ಐಪಿಎಲ್‌ನ ಶ್ರೇಷ್ಠ ಕ್ಯಾಚ್; ಟರ್ನಿಂಗ್ ಪಾಯಿಂಟ್
ಶನಿವಾರ, ಮೇ 18ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನಿರ್ಣಾಯಕ 68ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ರೋಚಕ 27 ರನ್‌ಗಳ ಗೆಲುವು ದಾಖಲಿಸಿತು.
ಈ ಮೂಲಕ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ತಮ್ಮ ಅಂತಿಮ ಲೀಗ್-ಹಂತದ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿದ ನಂತರ, ಐಪಿಎಲ್ 2024ರ ಪ್ಲೇಆಫ್‌ಗೆ ನಾಲ್ಕನೇ ಸ್ಥಾನಿಯಾಗಿ ಅರ್ಹತೆ ಗಳಿಸಿತು.

ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ತಂಡ 5ನೇ ಸ್ಥಾನ ಪಡೆದು ಐಪಿಎಲ್ 2024ರ ಪ್ಲೇಆಫ್‌ನಿಂದ ಹೊರಬಿದ್ದಿತು.
ಆರ್‌ಸಿಬಿ ಅಂಕಪಟ್ಟಿಯ ಟಾಪ್ 4ರಲ್ಲಿ ಅರ್ಹತೆ ಪಡೆಯಲು 18 ರನ್‌ಗಳಿಂದ ಗೆಲ್ಲಲೇಬೇಕಿತ್ತು. ಅಂತಿಮ ಓವರ್‌ನಲ್ಲಿ ಸಿಎಸ್‌ಕೆ ತಂಡಕ್ಕೆ 35 ರನ್‌ಗಳು ಬೇಕಾಗಿದ್ದಾಗ ಯಶ್ ದಯಾಳ್ ಆರಾಮವಾಗಿ ರಕ್ಷಿಸಿ, ಕೇವಲ 7 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು.
ಪ್ರಸಕ್ತ ಆವೃತ್ತಿಯಲ್ಲಿ ತಮ್ಮ ಮೊದಲ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತು ಪಂದ್ಯಾವಳಿಯಿಂದಲೇ ಹೊರಬಿತ್ತು ಎನ್ನುವ ಸ್ಥಿತಿಯಲ್ಲಿತ್ತು. ಆದರೆ, ನಂತರದ ಪಂದ್ಯಗಳಲ್ಲಿ ಅದ್ಭುತ ರೀತಿಯಲ್ಲಿ ಪುನರಾಗಮನ ಮಾಡಿದ ಕಾರಣ ಆರ್‌ಸಿಬಿ ಸತತ ಆರನೇ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಪರ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಕ್ಯಾಮೆರಾನ್ ಗ್ರೀನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 218 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಬಳಿಕ ಸಿಎಸ್‌ಕೆ ತಂಡ ರಚಿನ್ ರವೀಂದ್ರ ಅವರ ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿ ಅಬ್ಬರದ ಹೊರತಾಗಿಯೂ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್‌ಗಳಿಗೆ ನಿಯಂತ್ರಣಗೊಂಡು ಸೋಲೊಪ್ಪಿಕೊಂಡಿತು.
ಒಂದು ಹಂತದಲ್ಲಿ ಆರ್‌ಸಿಬಿ ತಂಡದ ಕೈಯಿಂದ ಜಾರಿಹೋಗಿದ್ದ ಗೆಲುವು ಮತ್ತೆ ತಿರುಗಲು ಹಲವು ಅಂಶಗಳು ಕಾರಣವಾಗಿವೆ. ಅದರಲ್ಲಿ ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಚಿನ್ ರವೀಂದ್ರ ಅವರ ರನೌಟ್, ಮಿಚೆಲ್ ಸ್ಯಾಂಟ್ನರ್ ಅವರ ಅದ್ಭುತ ಕ್ಯಾಚ್ ಪಡೆದ ಫಾಫ್ ಡು ಪ್ಲೆಸಿಸ್ ಮತ್ತು ಕೊನೆಯ ಓವರ್‌ನಲ್ಲಿ ಎಂಎಸ್ ಧೋನಿಯ ಔಟ್‌ಗಳು ಪ್ರಮುಖವಾಗಿವೆ.

ಆದರೆ, ಪಂದ್ಯಕ್ಕೆ ಪ್ರಮುಖ ತಿರುವು ನೀಡಿದ್ದು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಪಡೆದ ಐಪಿಎಲ್ ಇತಿಹಾಸದ ಶ್ರೇಷ್ಠ ಕ್ಯಾಚ್. ಸಮುದ್ರದಲ್ಲಿ ದೊಡ್ಡ ಮೀನಿನಂತೆ ಆಕಾಶಕ್ಕೆ ನೆಗೆದು ಚೆಂಡನ್ನು ಒಂದೇ ಕೈಯಲ್ಲಿ ಹಿಡಿದು ಮಿಚೆಲ್ ಸ್ಯಾಂಟ್ನರ್‌ನ ಪೆವಿಲಿಯನ್‌ಗೆ ಕಳಿಸಿದರು.
ಮೊಹಮ್ಮದ್ ಸಿರಾಜ್ ಎಸೆದ 15ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಎಸ್‌ಕೆ ಎಡಗೈ ಬ್ಯಾಟರ್ ಮಿಚೆಲ್ ಸ್ಯಾಂಟ್ನರ್ ಲೋ ಫುಲ್-ಟಾಸ್ ಚೆಂಡನ್ನು ಹಿಂದೆ ಬಾಗಿ 30-ಯಾರ್ಡ್ ವೃತ್ತದ ಅಂಚಿನಲ್ಲಿ ನಿಂತಿದ್ದ ಆರ್‌ಸಿಬಿ ನಾಯಕ ಫಾಫ್ ಕಡೆಗೆ ಬಾರಿಸಿದರು.
ಚೆಂಡು ಫಾಫ್ ಡು ಪ್ಲೆಸಿಸ್ ಅವರ ತಲೆಯ ಮೇಲೆ ಹೋಗುತ್ತಿದೆ ಎಂದು ತೋರುತ್ತಿತ್ತು. ಆದರೆ ಫಾಫ್ ಡು ಪ್ಲೆಸಿಸ್ ಸಮಯಕ್ಕೆ ಸರಿಯಾಗಿ ಮೇಲಕ್ಕೆ ಹಾರಿ ಕೈಚಾಚಿ ಪರಿಪೂರ್ಣ ಕ್ಯಾಚ್ ಪಡೆದರು. ಇದು ಆರ್‌ಸಿಬಿ, ಸಿಎಸ್‌ಕೆ ಆಟಗಾರರು ಮಾತ್ರವಲ್ಲದೆ, ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರಿಗೂ ದಿಗ್ಭ್ರಮೆ ಮೂಡಿಸಿತು ಮತ್ತು ಆರ್‌ಸಿಬಿ ತಂಡದೊಂದಿಗೆ ಇಡೀ ಕ್ರೀಡಾಂಗಣವು ವಿಕೆಟ್‌ಗೆ ಸಂಭ್ರಮಿಸಿತು.
ಸಿಎಸ್‌ಕೆ ಆಲ್‌ರೌಂಡರ್ ಕೇವಲ 3 ರನ್ ಗಳಿಸಿ ನಿರ್ಗಮಿಸಿದರು. ಫಾಫ್ ಡು ಪ್ಲೆಸಿಸ್ ಸದ್ಯ ನಡೆಯುತ್ತಿರುವ ಪಂದ್ಯಾವಳಿಯ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದನ್ನು ಪಡೆದುಕೊಂಡರು. ಬ್ಯಾಟಿಂಗ್‌ನಲ್ಲಿ ಅರ್ಧಶತಕ ಮತ್ತು ಉತ್ತಮ ಫೀಲ್ಡಿಂಗ್‌ನಿಂದಾಗಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಯನ್ನೂ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications