ಶನಿವಾರ, ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 68ನೇ ಹೈ-ವೋಲ್ಟೇಜ್ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪ್ರವಾಸಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಸೆಣಸಾಡಲಿವೆ.
ಪಂದ್ಯವು ಶನಿವಾರ ಭಾರತೀಯ ಕಾಲಮಾನ ರಾತ್ರಿ 7:30 ಕ್ಕೆ ಪ್ರಾರಂಭವಾಗಲಿದೆ ಮತ್ತು ನಿರ್ಣಾಯಕ ಪಂದ್ಯಕ್ಕೆ ಮಳೆ ಭೀತಿಯೂ ಎದುರಾಗಿದೆ. ಉಭಯ ತಂಡಗಳು ಐಪಿಎಲ್ 2024ರ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವುದರಿಂದ ಈ ಮುಖಾಮುಖಿ ರೋಮಾಂಚಕವಾಗಿರಲಿದೆ.

ಒಂದೂವರೆ ದಶಕಗಳಿಂದ ಐಪಿಎಲ್ ಇತಿಹಾಸದಲ್ಲಿ ದೊಡ್ಡ ಮುಖಾಮುಖಿ ಎಂದೇ ಕರೆಸಿಕೊಳ್ಳುವ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಹಣಾಹಣಿಗೆ ಮತ್ತೊಮ್ಮೆ ಕ್ಷಣಗಣನೆ ಆರಂಭವಾಗಿದೆ. ಗೆದ್ದ ತಂಡ ಪ್ಲೇಆಫ್ ಪವ್ರೇಶಿಸಲಿದ್ದರೆ, ಸೋತ ತಂಡ ಪ್ಲೇಆಫ್‌ನಿಂದ ಹೊರಬೀಳಲಿದೆ. ಅದರಲ್ಲೂ ಆರ್‌ಸಿಬಿ ತಂಡಕ್ಕೆ ದೊಡ್ಡ ಅಂತರದ ಗೆಲುವು ಅನಿವಾರ್ಯವಾಗಿದೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಪಂದ್ಯವನ್ನು ಮಿಶ್ರ ಫಲಿತಾಂಶಗಳೊಂದಿಗೆ ಪ್ರವೇಶಿಸಿದೆ. ಇದುವರೆಗೆ ಅಡಿದ 13 ಪಂದ್ಯಗಳನ್ನು ಆಡಿದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಇನ್ನು ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೆ ಆಡಿದ 13 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಹೀಗಾಗಿ ಸಿಎಸ್‌ಕೆ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್‌ನಲ್ಲಿ ಆರ್‌ಸಿಬಿ ಗೆಲ್ಲಬೇಕಿದೆ.
ಆದಾಗ್ಯೂ, ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ಕಳಪೆ ಅಂಕಿಅಂಶಗಳನ್ನು ಹೊಂದಿದ್ದು, ಅದೆಲ್ಲವನ್ನೂ ಮೀರಿ ಗೆಲುವಿನ ಕೇಕೆ ಹಾಕುವುದೇ ಕಾದು ನೋಡಬೇಕಿದೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ಈವರೆಗೆ 90 ಐಪಿಎಲ್ ಪಂದ್ಯಗಳನ್ನು ಆಡಿದ್ದು, 42ರಲ್ಲಿ ಗೆಲುವು ಸಾಧಿಸಿದ್ದರೆ, 43 ಪಂದ್ಯಗಳನ್ನು ಸೋತಿದೆ. ನಾಲ್ಕು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಸಿಎಸ್‌ಕೆ ತಂಡ ಈ ಮೈದಾನದಲ್ಲಿ ಪ್ರಬಲ ದಾಖಲೆಯನ್ನು ಹೊಂದಿದೆ. ಆಡಿದ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದೆ ಮತ್ತು 4ರಲ್ಲಿ ಸೋತಿದೆ.
ಬೆಂಗಳೂರಿನ ಐಕಾನಿಕ್ ಕ್ರೀಡಾಂಗಣದಲ್ಲಿ ಆಡಿದ ಪಂದ್ಯಗಳಲ್ಲಿ ತವರಿನ ಆರ್‌ಸಿಬಿ ತಂಡ ಸರಾಸರಿ ಸ್ಕೋರ್ 166 ರನ್ ಆಗಿದೆ. ಮತ್ತೊಂದೆಡೆ, ಸಿಎಸ್‌ಕೆ ತಂಡ ಪ್ರತಿ ಪಂದ್ಯದಲ್ಲಿ 171 ರನ್‌ಗಳೊಂದಿಗೆ ಸ್ವಲ್ಪ ಹೆಚ್ಚು ಸರಾಸರಿ ಹೊಂದಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಅತ್ಯುನ್ನತ ಸ್ಕೋರ್ ಎಂದರೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 263 ರನ್ ಆಗಿದ್ದು, ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ 2013ರಲ್ಲಿ ಸಾಧಿಸಿದ್ದು, ಇದರ ಪರಿಣಾಮವಾಗಿ 130 ರನ್‌ಗಳ ಗೆಲುವು ಸಾಧಿಸಿತ್ತು.
2014ರಲ್ಲಿ ಆರ್‌ಸಿಬಿ ವಿರುದ್ಧ 54 ರನ್‌ಗಳ ಗೆಲುವು ಸಾಧಿಸುವ ಮೊದಲು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 242 ರನ್ ಗಳಿಸಿದ್ದು ಸಿಎಸ್‌ಕೆ ತಂಡದ ಗರಿಷ್ಠ ಸ್ಕೋರ್ ಆಗಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ದಾಖಲಿಸಿದ ಅತ್ಯಂತ ಕಡಿಮೆ ಸ್ಕೋರ್ 10 ವಿಕೆಟ್‌ಗೆ 82 ರನ್. ಇದು 2008ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸಂಭವಿಸಿತು. ಕೆಕೆಆರ್ ಆ ಪಂದ್ಯವನ್ನು 140 ರನ್‌ಗಳಿಂದ ಬೃಹತ್ ಅಂತರದಲ್ಲಿ ಗೆದ್ದುಕೊಂಡಿತು.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಐಪಿಎಲ್ ಇತಿಹಾಸದಲ್ಲಿ 11 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಸಿಎಸ್‌ಕೆ ಆರು ಪಂದ್ಯಗಳಲ್ಲಿ ವಿಜಯಶಾಲಿಯಾಗಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.