ಸದ್ಯ ನಡೆಯುತ್ತಿರುವ 15ನೇ ಆವೃತ್ತಿಯ ಇಂಡಿಯಾ ಪ್ರೀಮಿಯರ್ ಲೀಗ್(ಐಪಿಎಲ್) 2022ರಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಕರ್ತವ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ ನಂತರ ಎಂಎಸ್ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಮುನ್ನಡೆಸುತ್ತಿದ್ದಾರೆ.
ರವೀಂದ್ರ ಜಡೇಜಾ ಅವರ ನಾಯಕತ್ವವು ಸಿಎಸ್‌ಕೆಗೆ ನಿರೀಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಸಿಎಸ್‌ಕೆ ಸತತ ಸೋಲಿಗೆ ಒಳಗಾಗಬೇಕಾಯಿತು, ಅಲ್ಲದೇ ಪ್ರಸಕ್ತ ಐಪಿಎಲ್ 2022 ಋತುವಿನಲ್ಲಿ ಪಾಯಿಂಟ್ಸ್ ಟೇಬಲ್‌ನ ಕೆಳಭಾಗದಲ್ಲಿ ಇರಿಸಿದೆ.
ಈಗ ಎಂಎಸ್ ಧೋನಿ ಮತ್ತೊಮ್ಮೆ ಸಿಎಸ್‌ಕೆ ತಂಡದ ಚುಕ್ಕಾಣಿ ಹಿಡಿದಿದ್ದು, ಇನ್ಮುಂದೆ ಇತರ ತಂಡಗಳ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯನ್ನು ನಿರೀಕ್ಷಿಸಬಹುದು. ಸಿಎಸ್‌ಕೆ ಆಡಿದ ಕೊನೆಯ ಪಂದ್ಯದಲ್ಲಿ ಎಸ್ಆರ್‌ಎಚ್ ವಿರುದ್ಧ ವಿರೋಚಿತ 13 ರನ್ ಗೆಲುವು ಸಾಧಿಸಿತು.

ನಾಯಕನಾಗಿ ಎಂಎಸ್ ಧೋನಿ ಮರಳುವುದರೊಂದಿಗೆ, ಅವರು ಬ್ಯಾಟ್‌ನಿಂದ ಕೆಲವು ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಂತರ 6000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ನಾಯಕನಾಗಲು ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಕೇವಲ 6 ರನ್‌ಗಳ ಅವಶ್ಯಕತೆ ಇದೆ.
ಮಹೇಂದ್ರ ಸಿಂಗ್ ಧೋನಿ ಪ್ರಸ್ತುತ 301 ಪಂದ್ಯಗಳಲ್ಲಿ (185 ಇನ್ನಿಂಗ್ಸ್) 38.67 ಸರಾಸರಿಯಲ್ಲಿ 23 ಅರ್ಧಶತಕಗಳನ್ನು ಒಳಗೊಂಡಂತೆ 5,994 ರನ್ ಗಳಿಸಿದ್ದಾರೆ. ಮರಳಿ ಸಿಎಸ್‌ಕೆ ನಾಯಕನಾಗಿ ತನ್ನ ಮೊದಲ ಪಂದ್ಯದಲ್ಲಿ, ಬಲಗೈ ಬ್ಯಾಟ್ಸ್‌ಮನ್ ಧೋನಿ 7 ಎಸೆತಗಳಲ್ಲಿ 8 ರನ್‌ಗಳನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗಳಿಸಿದರು.

ಇನ್ನೊಬ್ಬ ಭಾರತದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ 190 ಪಂದ್ಯಗಳಲ್ಲಿ (185 ಇನ್ನಿಂಗ್ಸ್) 5 ಶತಕ ಮತ್ತು 48 ಅರ್ಧಶತಕಗಳೊಂದಿಗೆ 43.29 ಸರಾಸರಿಯಲ್ಲಿ 6451 ರನ್ ಗಳಿಸಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಂತರ ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಾಯಕ ರೋಹಿತ್ ಶರ್ಮಾ ಇದುವರೆಗೆ 31.05 ಸರಾಸರಿಯಲ್ಲಿ 4721 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಬುಧವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಎಂಎಸ್ ಧೋನಿ ನೂತನ ಮೈಲಿಗಲ್ಲು ತಲುಪಬಹುದೇ ಎಂಬುದು ಕುತೂಹಲಕಾರಿಯಾಗಿದೆ.