RCB vs CSK: ಬೆಂಗಳೂರು ಬೀಸಿದ ಬಲೆಗೆ ಬಿದ್ದ ಕಿಂಗ್ಸ್: ಆರ್‌ಸಿಬಿ ಭರ್ಜರಿ ಗೆಲುವು
ಬೆಂಗಳೂರು: ಭರವಸೆಯ ಮಧ್ಯಮ ಕ್ರಮಾಂಕದ ಬ್ಯಾಟರ್ ಟೀಮ್ ಡೇವಿಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿಯ ಐಪಿಎಲ್ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್‌ಗಳಿಂದ ಮಣಿಸಿ, ಲೀಗ್‌ನಲ್ಲಿ ಸತತ ಎರಡನೇ ಗೆಲುವಿನ ನಗೆ ಬೀರಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಸೊಗಸಾದ ಆಟದ ಪ್ರದರ್ಶನ ನೀಡಿದ ಆರ್‌ಸಿಬಿ ಆರ್ಭಟಿಸಿದೆ.
251 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಸವಾಲಿನ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಪಂದ್ಯದ ಯಾವುದೇ ಹಂತದಲ್ಲಿ ಚೆನ್ನೈ ತಂಡ ಈ ಗುರಿಯನ್ನು ಬೆನ್ನಟ್ಟುವ ಸೂಚನೆಯನ್ನು ನೀಡಲೇ ಇಲ್ಲ. ಪವರ್ ಪ್ಲೇನಲ್ಲೇ ಚೆನ್ನೈ ತಂಡದ ಭರವಸೆಯ ಆಟಗಾರರಾದ ಸಂಜು ಸ್ಯಾಮ್ಸನ್ (9), ನಾಯಕ ರುತುರಾಜ್ ಗಾಯಕ್ವಾಡ್ (7), ಆಯುಷ್ ಮಾತ್ರೆ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ಮೂವರು ಆಟಗಾರರು ಪವರ್ ಪ್ಲೇನಲ್ಲಿ ಆಟ ಮುಗಿಸಿದರು.

ಭರವಸೆಯ ಯುವ ಆಟಗಾರ ಸರ್ಫರಾಜ್ ಖಾನ್ ತಂಡಕ್ಕೆ ಕೊಂಚ ಆಧಾರವಾದರು. ಇವರು 25 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ಔಟ್ ಆದರು.
57 ರನ್ ಜೊತೆಯಾಟ
ದುಬಾರಿ ಆಟಗಾರ ಕಾರ್ತಿಕ್ ಶರ್ಮಾ (6), ಭರವಸೆಯ ಆಟಗಾರ ಶಿವಂ ದುಬೆ (18) ರನ್ ಕಲೆಹಾಕುವಲ್ಲಿ ವಿಫಲರಾದರು. ಏಳನೇ ವಿಕೆಟ್‌ಗೆ ಪ್ರಶಾಂತ್ ವೀರ್ ಹಾಗೂ ಜೇಮಿ ಓವರ್‌ಟನ್ ಜೋಡಿ 32 ಎಸೆತಗಳಲ್ಲಿ 57 ರನ್ ಸಿಡಿಸಿತು. ಪ್ರಶಾಂತ್ ವೀರ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 43 ರನ್ ಸಿಡಿಸಿದರು. ಜೇಮಿ ಓವರ್‌ಟನ್ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 37 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದ ಬ್ಯಾಟರ್‌ಗಳು ಆರ್‌ಸಿಬಿ ನೀಡಿದ ರನ್ ಎವರೆಸ್ಟ್ ಏರುವಲ್ಲಿ ವಿಫಲವಾಯಿತು. ಚೆನ್ನೈ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಯಿತು.
ಆರ್‌ಸಿಬಿ ತಂಡದ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಜೇಕಬ್ ಡಫಿ, ಅಭಿನಂದನ್ ಸಿಂಗ್, ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಸಾಧಾರಣವಾಗಿತ್ತು. ಆರಂಭಿಕ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ 37 ರನ್ ಕಾಣಿಕೆ ನೀಡಿತು. ಈ ಹಂತದಲ್ಲಿ ವಿರಾಟ್ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 28 ರನ್ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಎರಡನೇ ವಿಕೆಟ್‌ಗೆ ಫಿಲ್ ಸಾಲ್ಟ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಜೋಡಿ 37 ಎಸೆತಗಳಲ್ಲಿ 56 ರನ್ ಸೇರಿಸಿತು. ಈ ವೇಳೆ ಸಾಲ್ಟ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಔಟ್ ಆದರು.
ಟೀಮ್ ಡೇವಿಡ್ ವಿರಾವೇಶ
ಮೂರನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಅವರನ್ನು ಸೇರಿಕೊಂಡ ರಜತ್ ಪಾಟಿದಾರ್ 58 ರನ್ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಅರ್ಧಶತಕ ಬಾರಿಸಿದ್ದ ದೇವದತ್ ಔಟ್ ಆದರು. ದೇವದತ್ ಪಟಿದಾರ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಟೀಮ್ ಡೇವಿಡ್ ಅಬ್ಬರ ನಡೆಸಿದರು. ಈ ಜೋಡಿ ಕೊನೆಯ ಐದು ಓವರ್‌ಗಳಲ್ಲಿ ರನ್ ಮಳೆ ಸುರಿಸಿತು. ಟೀಮ್ ಡೇವಿಡ್ 3 ಬೌಂಡರಿ, 8 ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ರಜತ್ ಪಾಟಿದಾರ್ ಅಜೇಯ 48 ರನ್ ಬಾರಿಸಿದರು. ಅಂತಿಮವಾಗಿ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್‌ಗೆ 250 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications