RCB vs GT: ಅಂಕಪಟ್ಟಿಯಲ್ಲಿ ಬಡ್ತಿಗಾಗಿ ಹೋರಾಟ- ನಮ್ಮೂರಲ್ಲೇ ನಮ್ಮವರ ಸವಾಲು
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರಿನಲ್ಲಿ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಜ್ಜಾಗಿದೆ. ಶುಕ್ರವಾರ ನಡೆಯಲಿರುವ 19ನೇ ಆವೃತ್ತಿ ಐಪಿಎಲ್‌ನ 34ನೇ ಪಂದ್ಯದಲ್ಲಿ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಉಭಯ ತಂಡಗಳದ್ದಾಗಿದೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ತನ್ನ ಘನತೆಗೆ ತಕ್ಕ ಆಟವನ್ನು ಆಡುತ್ತಿದ್ದು, ಗೆಲುವಿನ ವಿಶ್ವಾಸ ಹೊಂದಿದೆ.
ಆರ್‌ಸಿಬಿ ಈ ಬಾರಿ ತವರಿನಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಂಡಿರುವ ಸೋಲು ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಆ ಕಹಿ ನೆನಪನ್ನು ಮರೆತು ಆರ್‌ಸಿಬಿ ಮತ್ತೊಮ್ಮೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಆರ್‌ಸಿಬಿ ನಮ್ಮ ರಾಜ್ಯದ ತಂಡ ಎಂಬ ಹೆಗ್ಗಳಿಕೆ ಕನ್ನಡಿಗರದ್ದಾದರೆ, ನಮ್ಮ ಮಣ್ಣಿನ ಮಗ ಪ್ರಸಿದ್ಧ್ ಕೃಷ್ಣ ಗುಜರಾತ್ ಟೈಟಾನ್ಸ್ ಪರ ಕಣಕ್ಕೆ ಇಳಿಯುತ್ತಿರುವುದು ಎಲ್ಲರ ಚಿತ್ತ ಕದ್ದಿದೆ.

ಬೆಂಗಳೂರು ತಂಡದಲ್ಲಿರುವ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಪವರ್ ಪ್ಲೇಯ ಲಾಭ ಪಡೆದು ಬ್ಯಾಟ್ ಮಾಡಬೇಕಿದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದು, ಬಿಗ್ ಇನಿಂಗ್ಸ್ ಕಟ್ಟುವ ಕನಸು ಹೊಂದಿದ್ದಾರೆ. ದೇವದತ್ ಪಡಿಕ್ಕಲ್ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಬಲ್ಲ ಆಟಗಾರ.
ರಜತ್ ಆಕರ್ಷಣೆ
ಈ ಲೀಗ್‌ನಲ್ಲಿ ರಜತ್ ಪಾಟಿದಾರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಸಹ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ರಜತ್ ಅಪ್‌ಡೇಟ್ ವರ್ಷನ್‌ನಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಒತ್ತಡ ಹೆಚ್ಚಿದೆ. ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಟಿಮ್ ಡೇವಿಡ್ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರರು.
ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ವೇಗದ ಬೌಲಿಂಗ್ ನೊಗವನ್ನು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಜೋಶ್ ಹ್ಯಾಜಲ್‌ವುಡ್ ಹೊರಲಿದ್ದು, ಇವರಿಗೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಸಾಥ್ ನೀಡಬಲ್ಲರು. ರಸೀಕ್ ಸಲಾಂ ದರ್ ಸಹ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಸ್ಪಿನ್ ಬೌಲರ್ ಸುಯಶ್ ಶರ್ಮಾ ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದಾರೆ. ಇವರು ಬಿಗುವಿನ ದಾಳಿಯನ್ನು ಸಂಘಟಿಸಿದಲ್ಲಿ ಜಯದ ಆಸೆ ಫಲಿಸುತ್ತದೆ.

ಒತ್ತಡದಲ್ಲಿ ಗುಜರಾತ್
ಗುಜರಾತ್ ಟೈಟಾನ್ಸ್ ತಂಡ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 99 ರನ್ ರನ್‌ಗಳಿಂದ ಸೋತ ಬಳಿಕ ಗುಜರಾತ್ ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆಯುವ ಹಂಬಲ ಗುಜರಾತ್‌ದ್ದಾಗಿದೆ. ಟಾಪ್ ಆರ್ಡರ್ ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ಶುಭಮನ್ ಗಿಲ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ರನ್ ಕಲೆ ಹಾಕುವ ಅನಿವಾರ್ಯತೆ ಇದೆ.
ಟೈಟಾನ್ಸ್ ತಂಡದ ಬೌಲಿಂಗ್ ಉತ್ತಮವಾಗಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳಿಗೆ ಕಾಟ ನೀಡಬಲ್ಲರು. ಮಧ್ಯದ ಓವರ್‌ಗಳಲ್ಲಿ ಅಶೋಕ್ ಶರ್ಮಾ, ಪ್ರಸಿದ್ಧ್ ಕೃಷ್ಣ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬೇಕಿದೆ. ಸ್ಪಿನ್ ಬೌಲರ್ ಆಗಿ ರಶೀದ್ ಖಾನ್ ಕಾಣಿಸಿಕೊಳ್ಳಲಿದ್ದು, ವಿಕೆಟ್ ಪಡೆಯುವ ಕ್ಷಮತೆ ಹೊಂದಿದ್ದಾರೆ. ಈ ಪಂದ್ಯದಲ್ಲಿ ಗುಜರಾತ್ ಗೆಲುವು ದಾಖಲಿಸಲು ಸಂಘಟಿತ ಆಟದ ಅನಿವಾರ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

