ಶನಿವಾರ, ಮೇ 4ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 52ನೇ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಆರ್‌ಸಿಬಿ ತಂಡದ ಬೌಲಿಂಗ್ ತತ್ತರಿಸಿ, ಯಾವುದೇ ಅರ್ಧಶತಕವಲ್ಲದೆ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಗಿತ್ತು.

148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಫಾಫ್ ಡು ಪ್ಲೆಸಿಸ್ ಅರ್ಧಶತಕ ಮತ್ತು ವಿರಾಟ್ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 13.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಗೆಲುವಿನ ಗೆರೆ ದಾಟಿತು.
ಆರ್‌ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 92 ರನ್‌ಗಳ ಜೊತೆಯಾಟ ನಿರ್ಮಿಸಿತು. ಈ ವೇಳೆ 23 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ 64 ರನ್ ಬಾರಿಸಿ ಔಟಾದರು.
ಇನ್ನು ವಿರಾಟ್ ಕೊಹ್ಲಿ 27 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ನಂತರ ಬಂದ ವಿಲ್ ಜ್ಯಾಕ್ಸ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರೆ, ರಜತ್ ಪಾಟಿದಾರ್ ಕೇವಲ 2 ರನ್ ಗಳಿಸಿದರು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ 4 ರನ್ ಮತ್ತು ಕ್ಯಾಮೆರಾನ್ ಗ್ರೀನ್ ಕೇವಲ 1 ರನ್ ಗಳಿಸಿ ಔಟಾದರು.
ಕೊನೆಯಲ್ಲಿ ದಿನೇಶ್ ಕಾರ್ತಿಕ್ 12 ಎಸೆತಗಳಲ್ಲಿ 3 ಬೌಂಡರಿ ಮೂಲಕ ಅಜೇಯ 21 ರನ್ ಗಳಿಸಿದರೆ, ಸ್ವಪ್ನಿಲ್ ಸಿಂಗ್ 9 ಓವರ್‌ಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಅಜೇಯ 15 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಜೋಶ್ವಾ ಲಿಟಲ್ 4 ಓವರ್‌ಗಳಲ್ಲಿ 45 ರನ್ ನೀಡಿ 4 ವಿಕೆಟ್ ಪಡೆದರೆ, ನೂರ್ ಅಹ್ಮದ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದ ಬೌಲರ್‌ಗಳು ವಿಕೆಟ್ ರಹಿತರಾದರು ಮತ್ತು ದುಬಾರಿಯಾದರು.
ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಆರಂಭಿಸಿದ್ದ ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಉತ್ತಮ ಆರಂಭ ನೀಡಲಿಲ್ಲ. ಎರಡನೇ ಓವರ್‌ನಲ್ಲಿ ತಂಡದ ಮೊತ್ತ 1 ರನ್ ಆಗಿದ್ದಾಗ ವೃದ್ಧಿಮಾನ್ ಸಹಾ 1 ರನ್‌ಗೆ ಔಟಾದರೆ, ನಾಲ್ಕನೇ ಓವರ್‌ನಲ್ಲಿ ಶುಭ್ಮನ್ ಗಿಲ್ 2 ರನ್‌ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸಾಯಿ ಸುದರ್ಶನ್ 6 ರನ್, ಶಾರೂಖ್ ಖಾನ್ 37 ರನ್, ಡೇವಿಡ್ ಮಿಲ್ಲರ್ 30 ರನ್, ರಾಹುಲ್ ತೆವಾಟಿಯಾ 35 ರನ್, ರಶೀದ್ ಖಾನ್ 18 ರನ್, ವಿಜಯ್ ಶಂಕರ್ 10 ರನ್ ಗಳಿಸಿ ತಂಡದ ಮೊತ್ತ 140ರ ಗಡಿ ದಾಟಿಸಿದರು.
ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ಯಶ್ ದಯಾಳ್ 4 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಬಳಿಸಿದರು. ವಿಜಯ್‌ಕುಮಾರ್ ವೈಶಾಕ್ 3.3 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಕ್ಯಾಮೆರಾನ್ ಗ್ರೀನ್ ಮತ್ತು ಕರ್ಣ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.