RCB vs KKR IPL 2023: ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಗಾಯಾಳು ಟೋಪ್ಲೆ ಬದಲಿಗೆ ಈ ಮೂವರ ಮಧ್ಯೆ ಪೈಪೋಟಿ
ಭಾನುವಾರ, ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೂರನೇ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.
ಮುಂಬೈ ಇಂಡಿಯನ್ಸ್ ನೀಡಿದ್ದ 172 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ, ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 16.2 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯದಲ್ಲಿ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು, ಆದರೆ, ಅದಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಮತ್ತೊಂದು ಗಾಯದ ಸಮಸ್ಯೆ ಎದುರಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲೆ ಫೀಲ್ಡಿಂಗ್ ಮಾಡುವಾಗ ಬಲ ಭುಜದ ಗಾಯಕ್ಕೆ ಒಳಗಾದರು. ನಂತರ ಅವರನ್ನು ಡ್ರೆಸ್ಸಿಂಗ್ ರೂಮ್‌ಗೆ ಕರೆದೊಯ್ಯಲಾಯಿತು. ಗಾಯಗೊಳ್ಳುವ ಮುನ್ನ ರೀಸ್ ಟೋಪ್ಲೆ 2 ಓವರ್‌ಗಳ ಬೌಲಿಂಗ್ ಮಾಡಿ 14 ರನ್ ನೀಡಿ ಕ್ಯಾಮೆರಾನ್ ಗ್ರೀನ್ ಅವರ ವಿಕೆಟ್ ಪಡೆದಿದ್ದರು.
ವರದಿಗಳ ಪ್ರಕಾರ, ಏಪ್ರಿಲ್ 6ರಂದು ಕೆಕೆಆರ್ ವಿರುದ್ಧದ ಪಂದ್ಯವನ್ನು ರೀಸ್ ಟೋಪ್ಲಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಅವರ ಸ್ಥಾನವನ್ನು ತುಂಬಲು ಆರ್‌ಸಿಬಿ ತಂಡದ ಮೂವರು ಸಮರ್ಥ ಬದಲಿ ಆಟಗಾರರು ಇಲ್ಲಿದ್ದಾರೆ.

ಡೇವಿಡ್ ವಿಲ್ಲಿ
2022ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕಾಗಿ ಇಂಗ್ಲೆಂಡ್‌ನ ಆಲ್‌ರೌಂಡರ್ ಡೇವಿಡ್ ವಿಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ರೀಸ್ ಟೋಪ್ಲೆಯಂತೆ ಚೆಂಡನ್ನು ಎರಡೂ ಬದಿಗಳಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಡೇವಿಡ್ ವಿಲ್ಲಿ ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವ ಬೌಲರ್ ಕೂಡ ಆಗಿದ್ದಾರೆ ಮತ್ತು ಬ್ಯಾಟಿಂಗ್‌ನಲ್ಲಿ ಸ್ಫೋಟಕ ಆಟವಾಡುವುದರಿಂದ ಆರ್‌ಸಿಬಿ ತಂಡಕ್ಕೆ ಅಗತ್ಯ ಬಲವನ್ನು ತಂದುಕೊಡಲಿದ್ದಾರೆ.
ಅವಿನಾಶ್ ಸಿಂಗ್
ಅವಿನಾಶ್ ಸಿಂಗ್ ಭಾರತೀಯ ಅನ್‌ಕ್ಯಾಪ್ಡ್ ಆಟಗಾರನಾಗಿದ್ದು, ಉಮ್ರಾನ್ ಮಲಿಕ್ ಅವರಂತೆ ವೇಗದ ಬೌಲಿಂಗ್ ಮಾಡಬಲ್ಲವರಾಗಿದ್ದಾರೆ. ವೇಗಿ ಅವಿನಾಶ್ ಸಿಂಗ್ ಗಂಟೆಗೆ 145 ಕಿಮೀ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುತ್ತಾರೆ. ಇವರು ಬೌಲಿಂಗ್ ಆಯ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ದೊಡ್ಡ ಆಸ್ತಿಯಾಗಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರೀಸ್ ಟೋಪ್ಲೆ ಆಡಲು ವಿಫಲರಾದರೆ ಆರ್‌ಸಿಬಿ ತಂಡದ ಆಡುವ 11ರ ಬಳಗದಲ್ಲಿ ಅವಿನಾಶ್ ಸಿಂಗ್ ಸ್ಥಾನ ಪಡೆದುಕೊಳ್ಳಬಹುದು.

ಸಿದ್ಧಾರ್ಥ್ ಕೌಲ್
ಸಿದ್ಧಾರ್ಥ್ ಕೌಲ್ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆರ್‌ಸಿಬಿ ಪರ ಆಡಿದ ಅನುಭವವನ್ನು ಹೊಂದಿದ್ದಾರೆ. ಬಲಗೈ ವೇಗಿ ಸಿದ್ಧಾರ್ಥ್ ಕೌಲ್ ಅವರು ರೀಸ್ ಟೋಪ್ಲೆಗೆ ಪರಿಪೂರ್ಣ ಬದಲಿ ಆಟಗಾರನಾಗಬಹುದು. ವೇಗದ ಬೌಲಿಂಗ್ ಮೂಲಕ ಪವರ್ ಪ್ಲೇ, ಮಧ್ಯಮ ಓವರ್ ಮತ್ತು ಡೆತ್ ಓವರ್‌ಗಳಲ್ಲಿ ಸರಿಯಾದ ಲೆಂತ್‌ಗಳನ್ನು ಹಾಕುತ್ತಾರೆ.
16ನೇ ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದಲ್ಲಿದ್ದ ಆಲ್‌ರೌಂಡರ್ ವಿಲ್ ಜಾಕ್ಸ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು. ಅವರ ಬದಲಿಯಾಗಿ ನ್ಯೂಜಿಲೆಂಡ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಆಯ್ಕೆ ಮಾಡಲಾಯಿತು. ಇನ್ನು ಆರ್‌ಸಿಬಿ ತಂಡದ ಪ್ರಮುಖ ವೇಗಿ ಜೋಶ್ ಹೇಝಲ್‌ವುಡ್ ಗಾಯದಿಂದ ಚೇತರಿಕೊಳ್ಳುತ್ತಿದ್ದು, ಏಪ್ರಿಲ್ 14ರ ನಂತರ ತಂಡವನ್ನು ಕೂಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications