ಈಗ ಏಷ್ಯಾಕಪ್ ಟೂರ್ನಿ, ವಿಶ್ವಕಪ್‌ನಂಥಾ ಮೆಗಾ ಟೂರ್ನಿಗಳ ಮೇಲೆ ಕ್ರಿಕೆಟ್ ಅಭಿಮಾನಿಗಳ ಗಮನವೆಲ್ಲಾ ನೆಟ್ಟಿದೆ. ಇಂಥಾ ಸಂದರ್ಭದಲ್ಲಿ ಐಪಿಎಲ್ ಬಗ್ಗೆ ಮಾತನಾಡಿದರೆ ಬಹುತೇಕರಿಗೆ ನೀರಸ ಎನಿಸುವ ಸಾಧ್ಯತೆಯೇ ಹೆಚ್ಚು. ಅದಕ್ಕೆ ಕಾರಣ ಐಪಿಎಲ್ ಆರಂಭಕ್ಕೆ ಇನ್ನೂ ಕನಿಷ್ಠ 6-7 ತಿಂಗಳ ಸಮಯವಿದೆ. ಆದರೆ ಇಂಥಾ ಸಂದರ್ಭದಲ್ಲಿಯೂ ಐಪಿಎಲ್‌ಗೆ ಸಂಬಂಧಿಸಿದ ಒಂದು ಹೇಳಿಕೆ ಈಗ ಕ್ರಿಕೆಟ್ ಅಭಿಮಾನಿಗಳಿಗೆ ಮುದನೀಡುವಂತಿದೆ.
ಆಸ್ಟ್ರೇಲಿಯಾದ ಸೂಪರ್‌ಸ್ಟಾರ್ ಆಟಗಾರ ಮುಂಬರುವ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡುವ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾದ ಸಾಕಷ್ಟು ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದರೂ ರಾಷ್ಟ್ರೀಯ ತಂಡದ ಜವಾಬ್ಧಾರಿಯ ಕಾರಣದಿಂದಾಗಿ ಸುದೀರ್ಘ ಕಾಲದಿಂದ ಐಪಿಎಲ್‌ನಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಐಪಿಎಲ್‌ನಲ್ಲಿ ಆಡುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೀಗೆ ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿ ಆಡುವ ಘೋಷಣೆ ಮಾಡಿದ ಆಟಗಾರ. ಮುಂದಿನ ವರ್ಷ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಾನು ಆಡಲಿದ್ದೇನೆ ಎಂದು ಮಿಚೆಲ್ ಸ್ಟಾರ್ಕ್ ಪ್ರಕಟಿಸಿದ್ದಾರೆ. ಅದೇ ವರ್ಷ ಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ ಸ್ಟಾರ್ಕ್.
ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಆಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ. 2015ರ ಐಪಿಎಲ್ ಆವೃತ್ತಿಯಲ್ಲಿ ಅವರು ಅಂತಿಮ ಬಾರಿಗೆ ಕಾಣಿಸಿಕೊಂಡಿದ್ದರು. ಅದಾದ ಬಳಿಕ ರಾಷ್ಟ್ರೀಯ ತಂಡದ ಮೇಲೆ ಹೆಚ್ಚಿನ ಗಮನ ನೀಡುವ ದೃಷ್ಟಿಯಿಂದ ಐಪಿಎಲ್‌ನಿಂದ ದೂರವುಳಿಯುತ್ತಲೇ ಬಂದಿದ್ದಾರೆ. 2024ರಲ್ಲಿ ಆಡಲು ಸಿದ್ದ ಎಂದು ಘೋಷಣೆ ಮಾಡಿವ ಮೂಲಕ 9 ವರ್ಷಗಳ ನಂತರ ಕಮ್‌ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ.
ಮಿಚೆಲ್ ಸ್ಟಾರ್ಕ್ ಈವರೆಗೆ ಐಪಿಎಲ್‌ನಲ್ಲಿ 27 ಪಂದ್ಯಗಳನ್ನು ಆಡಿದ್ದು 34 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಎಕಾನಮಿ ರೇಟ್ 7.17. 2014ರ ಆವೃತ್ತಿಯಲ್ಲಿ 15 ರನ್‌ಗಳಿಗೆ 4 ವಿಕೆಟ್ ಅವರ ಅತ್ಯುತ್ತಮ ಬೌಲಿಂಗ್. 2014ರಲ್ಲಿ 14 ಪಂದ್ಯಗಳನ್ನು ಆಡಿದ್ದ ಅವರು 2015ರಲ್ಲಿ 13 ಪಂದ್ಯಗಳಲ್ಲಿ ಆರ್‌ಸಿಬಿ ಪರವಾಗಿ ಆಡಿದ್ದರು. ನಂತರ 2018ರಲ್ಲಿ ಆಡಲು ಸಿದ್ದವಾಗಿದ್ದರೂ ಕೂಡ ಗಾಯದ ಕಾರಣದಿಂದಾಗಿ ಟೂರ್ನಿಯನ್ನು ತಪ್ಪಿಸಿಕೊಳ್ಳಬೇಕಾಯಿತು.
ಖಾಸಗಿ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ಮಿಚೆಲ್ ಸ್ಟಾರ್ಕ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. "ಐಪಿಎಲ್‌ನಲ್ಲಿ ನಾನು ಆಡದೆ 8 ವರ್ಷಗಳಾಗಿದೆ. ಮುಂದಿನ ವರ್ಷ ನಾನು ಖಂಡಿತವಾಗಿಯೂ ಆಡಲಿದ್ದೇನೆ. ಅದು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಅದ್ಭುತವಾದ ಸಿದ್ಧತೆಯಾಗಿರಲಿದೆ. ಐಪಿಎಲ್‌ನಲ್ಲಿ ಅಸಕ್ತರಾಗಿರುವ ಯಾರಿಗೇ ಆದರೂ ಅದು ವಿಶ್ವಕಪ್‌ಗೆ ಉತ್ತಮವಾದ ಸಿದ್ಧತೆಯಾಗಿರಲಿದೆ" ಎಂದಿದ್ದಾರೆ. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯಾಗಲಿದೆ.