ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಕ್ಕೆ ಈ ಅಂಶಗಳೇ ಕಾರಣ!

ಕಳೆದ ವರ್ಷದ ಜನವರಿ ತಿಂಗಳಲ್ಲಿ ಭಾರತ ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಈ ಮೂರೂ ತಂಡಗಳ ನಾಯಕನಾಗಿದ್ದ ವಿರಾಟ್ ಕೊಹ್ಲಿ ಈ ವರ್ಷದ ಜನವರಿ ತಿಂಗಳಿನಲ್ಲಿ ಭಾರತ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ತಂಡಗಳ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಮೊದಲಿಗೆ ಸ್ವಇಚ್ಛೆಯಿಂದ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ನಂತರ ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲ್ಪಟ್ಟರು.
ಸೀಮಿತ ಓವರ್ ಮಾದರಿಗಳಿಗೆಲ್ಲಾ ಓರ್ವನೇ ನಾಯಕನಿರಬೇಕು ಎಂಬ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕಾರಣವನ್ನು ನೀಡಿದ್ದ ಬಿಸಿಸಿಐ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿ ರೋಹಿತ್ ಶರ್ಮಾಗೆ ನೂತನ ನಾಯಕನ ಪಟ್ಟವನ್ನು ನೀಡಿತ್ತು. ಹೀಗೆ ಭಾರತ ಟಿ ಟ್ವೆಂಟಿ ಮತ್ತು ಏಕದಿನ ಎರಡೂ ತಂಡಗಳ ನಾಯಕತ್ವವನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಇದೀಗ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ತ್ಯಜಿಸಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಪೈಕಿಯ 2 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ 1 ಪಂದ್ಯದಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದರು.
ಜನವರಿ 14ರಂದು ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ಜನವರಿ 15ರಂದು ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಘೋಷಿಸಿದ್ದಾರೆ. ಕೊಹ್ಲಿಯ ಈ ದಿಢೀರ್ ಘೋಷಣೆ ಇದೀಗ ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಕ್ಷಕರಲ್ಲಿ ಆಶ್ಚರ್ಯವನ್ನು ಉಂಟು ಮಾಡಿದ್ದು, ಕೊಹ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣಗಳೇನು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಲು ಕಾರಣವಾದ ಅಂಶಗಳ ವಿವರ ಈ ಕೆಳಕಂಡಂತಿದೆ..

ಟಿ ಟ್ವೆಂಟಿ ವಿಶ್ವಕಪ್ ಸೋಲು ವಿರಾಟ್ ಕೊಹ್ಲಿಗೆ ಹಿನ್ನಡೆಯನ್ನುಂಟು ಮಾಡಿತು
ಕಳೆದ ವರ್ಷ ನಡೆದ ಐಸಿಸಿ ಟಿ ಟ್ವೆಂಟಿ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಹೊರಬೀಳುವುದರ ಮೂಲಕ ಕಳಪೆ ಪ್ರದರ್ಶನವನ್ನು ನೀಡಿದ್ದು ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿವೆ. ಹೀಗಾಗಿ ಇದೀಗ ಎಲ್ಲಾ ಮಾದರಿಗಳ ನಾಯಕತ್ವದಿಂದಲೂ ಕೊಹ್ಲಿ ಹಿಂದೆ ಸರಿದಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಟೆಸ್ಟ್ ನಾಯಕತ್ವದಿಂದ ಹಿಂದೆ ಸರಿಯಲು ಕಾರಣ ಆ ಒಂದು ಪಂದ್ಯ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲುವುದರ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಸೋಲಿನ ಸರಪಳಿಯನ್ನು ಮುಂದುವರೆಸಿದೆ. ಹೀಗೆ ಈ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸೋತದ್ದು ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಹಿಂದೆ ಸರಿಯಲು ಕಾರಣ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೋತು ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡದ್ದೇ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ಬಿಟ್ಟುಕೊಟ್ಟಿರುವುದಕ್ಕೆ ಅಸಲಿ ಕಾರಣ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ನಾಯಕತ್ವದಿಂದ ಕೆಳಗಿಳಿಯಲು ಈ ಅಂಶಗಳು ಕೂಡಾ ಕಾರಣ
ಇನ್ನು ವಿರಾಟ್ ಕೊಹ್ಲಿ ಕಳೆದೊಂದು ವರ್ಷದಿಂದ ನಾಯಕನಾಗಿ ಸಾಕಷ್ಟು ಸೋಲುಗಳನ್ನು ಅನುಭವಿಸಿದ್ದಾರೆ. ಅದರ ಜತೆಗೆ ತಂಡದ ಆಟಗಾರರನ್ನು ವಹಿಸಿಕೊಂಡದ್ದಕ್ಕೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ ಕೂಡ. ಹೀಗೆ ಪದೇ ಪದೇ ಟೀಕೆಗೊಳಗಾಗುತ್ತಿರುವ ವಿರಾಟ್ ಕೊಹ್ಲಿ ಹೆಚ್ಚಿನ ಒತ್ತಡಗಳಿಗೆ ಒಳಗಾಗದೇ ಆಟಗಾರನಾಗಿ ಟೀಮ್ ಇಂಡಿಯಾಗೆ ತನ್ನ ಪಾಲಿನ ಕೊಡುಗೆಯನ್ನು ನೀಡಲು ಎಲ್ಲಾ ಮಾದರಿಯ ನಾಯಕತ್ವವನ್ನೂ ತ್ಯಜಿಸಿದ್ದಾರೆ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾಗುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications