ಸಿಡ್ನಿ, ಫೆ.27: ಕ್ರಿಕೆಟ್ ಜಗತ್ತಿನಲ್ಲಿ ವೇಗಕ್ಕೆ ಮತ್ತೊಂದು ಹೆಸರೇ ಎಬಿ ಡಿವಿಲೆಯರ್ಸ್ ವೇಗವಾಗಿ ವಿಕೆಟ್ ಗಳ ನಡುವೆ ರನ್ ಕದಿಯುವುದಿರಲಿ, ವೇಗದ ಶತಕ ದಾಖಲಿಸುವುದಿರಲಿ, ಸ್ಲಾಗ್ ಓವರ್ಸ್ ನಲ್ಲಿ ತಂಡಕ್ಕೆ ಆಸರೆಯಾಗುವುದಿರಲಿ ಎಬಿಡಿ ಇದ್ದರೆ ಭಯವಿಲ್ಲ. ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿವೇಗದ ಶತಕ ಸಾಧನೆ ದಾಖಲೆ ಹೊಂದಿರುವ ಎಬಿಡಿ ಈಗ ವಿಶ್ವಕಪ್ ನಲ್ಲೂ ದಾಖಲೆಗಳ ಧೂಳಿಪಟ ಮಾಡುತ್ತಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನ(ಎಸ್ ಸಿಜಿ) ದಲ್ಲಿ ವಿಂಡೀಸ್ ಬೌಲರ್ ಗಳು ಬೌಲಿಂಗ್ ಎಬಿಸಿಡಿ ಮರೆಯುವಂತೆ ಮಾಡಿದ ಎಬಿಡಿ ಅತ್ಯಂತ ತ್ವರಿತಗತಿಯಲ್ಲಿ 150ರನ್ ಹೊಡೆದ ದಾಖಲೆ ಬರೆದರು. ತ್ವರಿತಗತಿಯ ಶತಕ ದಾಖಲೆ 2 ಎಸೆತಗಳಲ್ಲಿ ಮಿಸ್ ಮಾಡಿಕೊಂಡರು.
ಬಿ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 50 ಓವರ್ಸ್ ಗಳಲ್ಲಿ 408/5 ಸ್ಕೋರ್ ಮಾಡಿದೆ. ಇದು ಆಸ್ಟ್ರೇಲಿಯಾದಲ್ಲಿ ದಾಖಲಾಗಿರುವ ಅತ್ಯಧಿಕ ಟೀಂ ಸ್ಕೋರ್ ಆಗಿದೆ. [ಪಂದ್ಯದ ವರದಿ ಇಲ್ಲಿ ಓದಿ]

ಎಬಿ ಡಿವಿಲಿಯೆರ್ಸ್ ಏಕದಿನ ಕ್ರಿಕೆಟ್ ನಲ್ಲಿ 31 ಎಸೆತಗಳಲ್ಲಿ 100ರನ್ ದಾಖಲಿಸಿ ಇನ್ನೂ ಒಂದು ತಿಂಗಳು ಹಾಗೂ ಹೀಗೂ ಕಳೆದಿದೆ. ಅಷ್ಟರಲ್ಲೇ ಅದೇ ಇನ್ನಿಂಗ್ಸ್ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶನ ನೀಡಿ ಸಿಡ್ನಿ ಹಾಗೂ ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದರು.
ನಾಯಕ ಎಬಿ ಡಿವಿಲೆಯರ್ಸ್ 52 ಎಸೆತಗಳಲ್ಲಿ 102ರನ್ ಚೆಚ್ಚಿದರು. 64 ಎಸೆತಗಳಲ್ಲಿ 150 ರನ್ ಬಾರಿಸಿದರು. ಈ ಮೂಲಕ 50 ಓವರ್ ಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ತ್ವರಿತ ಗತಿಯಲ್ಲಿ 50, 100 ಹಾಗೂ 150 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. [ಶತಕ ದಾಖಲಿಸಲು ಡೆವಿಲಿಯರ್ಸ್ ಗೆ 31 ಬಾಲ್ ಸಾಕು]
ವೆಸ್ಟ್ ಇಂಡೀಸ್ ವಿರುದ್ಧದ ಫೆ.27ರ ವಿಶ್ವಕಪ್ ಬಿ ಗುಂಪಿನ ಪಂದ್ಯದಲ್ಲಿ 20ನೇ ಏಕದಿನ ಕ್ರಿಕೆಟ್ ಶತಕ ಬಾರಿಸಿದ ಎಬಿಡಿ 62 ಎಸೆತಗಳಲ್ಲಿ 162ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಇದು ಅವರ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.
ಎಬಿಡಿ ಏಕದಿನ ಕ್ರಿಕೆಟ್ ದಾಖಲೆಗಳು
* 50 ರನ್ (16 ಎಸೆತಗಳು)
* 100 ರನ್ (31 ಎಸೆತಗಳು)
* 150 ರನ್ (64 ಎಸೆತಗಳು)
ವಿಶ್ವಕಪ್ ತ್ವರಿತ ಗತಿ 100 ದಾಖಲೆಗಳು
* 50 ಎಸೆತಗಳು- ಕೆವಿನ್ ಓ ಬ್ರಿಯಾನ್ (ಐರ್ಲೆಂಡ್) vs ಇಂಗ್ಲೆಂಡ್, 2011 (ಬೆಂಗಳೂರು)
* 52- ಎಬಿ ಡಿವಿಲೆಯರ್ಸ್ (ದಕ್ಷಿಣ ಆಫ್ರಿಕಾ) vs ವೆಸ್ಟ್ ಇಂಡೀಸ್, 2015 (ಸಿಡ್ನಿ)
* 66- ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ) vs ದಕ್ಷಿಣ ಆಫ್ರಿಕಾ, 2007 (ಸೈಂಟ್ ಕಿಟ್ಸ್)
* 67 - ಜಾನ್ ಡೇವಿಡ್ ಸನ್ (ಕೆನಡಾ) vs ವೆಸ್ಟ್ ಇಂಡೀಸ್, 2003 (ಸೆಂಚೂರಿಯನ್)
ಒನ್ ಇಂಡಿಯಾ ಸುದ್ದಿ