ರಾಯ್‌ಪುರ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಪ್ರವಾಸಿ ತಂಡ ನೀಡಿದ್ದ 209 ರನ್‌ಗಳ ಗುರಿಯನ್ನು ಸೂರ್ಯ ಪಡೆ 3 ವಿಕೆಟ್ ಕಳೆದುಕೊಂಡು ಮುಟ್ಟಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಗೆಲುವಿನ ಟೀಮ್ ಇಂಡಿಯಾ ದೊಡ್ಡ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 208 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭಿಕರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡದ ಗೆಲುವಲ್ಲಿ ಮಿಂಚಿತು. ಈ ಇಬ್ಬರೂ ಆಟಗಾರರು ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಸಿಡಿಸಿದರು.

ಟೀಮ್ ಇಂಡಿಯಾ ಈ ಸವಾಲಿನ ಗುರಿಯನ್ನು ಕೇವಲ 15.2 ಓವರ್‌ಗಳಲ್ಲಿ ಮುಟ್ಟಿತು. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿತು. ಐಸಿಸಿ ಪೂರ್ಣ ಸದಸ್ಯತ್ವ ತಂಡಗಳ ನಡುವೆ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಚೆಂಡಗಳು ಬಾಕಿ ಇರುವಾಗ 200 ರನ್‌ಗಳನ್ನು ಚೇಸ್ ಮಾಡಿದ ಹೆಗ್ಗಳಿಕೆ ಸೂರ್ಯಕುಮಾರ್ ಪಡೆಯದ್ದಾಯಿತು. ಈ ದಾಖಲೆಯ ಗೆಲುವಿನ ಮೂಲಕ ಟೀಮ್ ಇಂಡಿಯಾ ದೊಡ್ಡ ರೆಕಾರ್ಡ್ ನಿರ್ಮಿಸಿದೆ.
200 ರನ್‌ಗಳ ಗುರಿಯನ್ನು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬೆನ್ನಟ್ಟಿದ ದಾಖಲೆ ಆಸ್ಟ್ರೇಲಿಯಾ ತಂಡದ್ದಾಗಿದೆ. ಆಸೀಸ್ ಈ ವರೆಗೆ ಏಳು ಬಾರಿ ಈ ಸಾಧನೆ ಮಾಡಿದೆ. ಟೀಮ್ ಇಂಡಿಯಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಈಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದ್ದು, ಐದು ಬಾರಿ ಈ ಸಾಧನೆ ಮಾಡಿದೆ.
ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಈ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಾಯದಿಂದ 76 ರನ್ ಬಾರಿಸಿದರು. ಇದರ ಪರಿಣಾಮ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯನ್ನು ಪಡೆದ ಮಾತನಾಡಿದ ಇಶಾನ್, ಮೊದಲ ಎಸೆತದಿಂದಲೂ ಉತ್ತಮವಾಗಿ ಆಡಿದ್ದೇನೆ. ನಾನು ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ದೊಡ್ಡ ಹೊಡೆತಗಳ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿತು. ತಂಡದಿಂದ ಕೈಬಿಟ್ಟ ನಂತರ, ನಾನು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುವತ್ತ ಗಮನಹರಿಸಿದೆ. ಭಾರತಕ್ಕೆ ಆಡಲು ಅರ್ಹನೆ ಎಂಬ ಪ್ರಶ್ನೆಯನ್ನು ನಾನೇ ಕೇಳಿಕೊಂಡೆ. ಅದಕ್ಕಾಗಿ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ರನ್ ಕಲೆ ಹಾಕಿ ಅಬ್ಬರಿಸಿದೆ ಎಂದು ತಿಳಿಸಿದ್ದಾರೆ.