ಮುಂಬೈ: ಟಿ20 ವಿಶ್ವಕಪ್ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 29 ರನ್‌ಗಳ ಜಯವನ್ನು ಯುಎಸ್‌ಎ ವಿರುದ್ಧ ದಾಖಲಿಸಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ ವಿಶ್ವದಾಖಲೆಯನ್ನು ನಿರ್ಮಿಸಿದೆ.
ಟಿ20 ವಿಶ್ವಕಪ್‌ನ "ಎ" ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಯುಎಸ್‌ಎ ವಿರುದ್ಧ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಸಿಡಿಸಿತು. ಈ ವೇಳೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 84 ರನ್ ಬಾರಿಸಿ ಮಿಂಚಿದರು. ಗುರಿಯನ್ನು ಬೆನ್ನಟ್ಟಿದ ಯುಎಸ್‌ಎ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಸೇರಿಸಿ ಸೋಲು ಕಂಡಿತು. ಭಾರತದ ಪರ ಮೊಹಮ್ಮದ್ ಸಿರಾಜ್ 3, ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ದೊಡ್ಡ ದಾಖಲೆಯನ್ನು ಬರೆದರು.

ಸೂರ್ಯ ಪಡೆ ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ ವಿರುದ್ಧ ಜಯ ಸಾಧಿಸಿದ ಬಳಿಕ ವಿಶ್ವದಾಖಲೆಯನ್ನು ನಿರ್ಮಿಸಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಸತತ ಅತಿ ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿದ ರೆಕಾರ್ಡ್ ಬರೆದಿದೆ. ಈ ಮೆಗಾ ಈವೆಂಟ್‌ನಲ್ಲಿ ಟೀಮ್ ಇಂಡಿಯಾ ಸತತ 9 ನೇ ಗೆಲುವು ದಾಖಲಿಸಿ, ದಕ್ಷಿಣ ಆಫ್ರಿಕಾದ ದಾಖಲೆಯನ್ನು ಅಳಿಸಿ ಹಾಕಿದೆ. ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ನಲ್ಲಿ ಸತತ 8 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿತ್ತು. ಈಗ ಇದು ಟೀಮ್ ಇಂಡಿಯಾ ಪಾಲಾಗಿದೆ.
ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಹ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಆಪದ್ಬಾಂಧವರಾಗಿ ನಿಂತರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಸೂರ್ಯ, ತಮ್ಮ 'ಮಿಸ್ಟರ್ 360' ಖ್ಯಾತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 48 ಗಂಟೆಗಳ ಮುನ್ನ ಟಿ20 ವಿಶ್ವಕಪ್ ತಂಡದ ಭಾಗವೇ ಆಗಿರದ ಮೊಹಮ್ಮದ್ ಸಿರಾಜ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಆರ್ಭಟಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ 2026 ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ.