ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಫಾರ್ಮ್ ಕಳೆದುಕೊಂಡಿರುವ ಸೂರ್ಯಕುಮಾರ್ ಯಾದವ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾ ಸೂರ್ಯಕುಮಾರ್ ಯಾದವ್‌ಗೆ ಬೆಂಬಲವಾಗಿ ನಿಲ್ಲಬೇಕು ಎಂದಿದ್ದು ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ ಆಟಗಾರ ಎಂದು ಹೊಗಳಿದ್ದಾರೆ.
ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ನೀಡಿರುವ ಪ್ರದರ್ಶನವನ್ನು ಉಲ್ಲೇಖಿಸಿರುವ ರಿಕಿ ಪಾಂಟಿಂಗ್ ದೊಡ್ಡ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯವನ್ನು ಉಲ್ಲೇಖಿಸಿದ್ದಾರೆ. ಈ ಸಾಮರ್ಥ್ಯ ಅತ್ಯಂತ ಅಪರೂಪದ್ದು ಎಂದು ರಿಕಿ ಪಾಂಟಿಂಗ್ ಸೂರ್ಯಕುಮಾರ್ ಯಾದವ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

ಟೀಮ್ ಇಂಡಿಯಾದ ಅಗ್ರ ಸ್ಥಾನ ಕ್ರಮಾಂಕದಲ್ಲಿ ರೋಹಿತ್ ಶರ್ಮಾ, ಯುವ ಆಟಗಾರ ಶುಬ್ಮನ್ ಗಿಲ್, ಅನುಭವಿ ವಿರಾಟ್ ಕೊಹ್ಲಿ ಪ್ರಮುಖ ಸ್ಥಾನಗಳನ್ನು ತುಂಬಲಿದ್ದಾರೆ. ಹಾಗಿದ್ದರೂ ಭಾರತದ ಏಕದಿನ ಮಾದರಿಯಲ್ಲಿ ಅಗ್ರ 6 ಕ್ರಮಾಂಕದಲ್ಲಿ ಕೆಲ ಸ್ಥಾನಗಳನ್ನು ತುಂಬಬಲ್ಲ ಆಟಗಾರರು ಯಾರು ಎಂಬುದು ಸ್ಪಷ್ಟವಾಗಿಲ್ಲ. ವಿಶ್ವಕಪ್ ದೃಷ್ಟಿಯಿಂದ ಈ ಸ್ಥಾನಗಳು ಮಹತ್ವ ಪಡೆದುಕೊಂಡಿದೆ.
ಐಸಿಸಿ ರಿವ್ಯೂಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಿಕಿ ಪಾಂಟಿಂಗ್ ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. "ಖಂಡಿತವಾಗಿಯೂ ಎಲ್ಲರು ಕೂಡ ತಮ್ಮ ವೃತ್ತಿ ಜೀವನದಲ್ಲಿ ಇಂಥಾ ಸಂದರ್ಭವನ್ನು ಎದುರಿಸುತ್ತಾರೆ. ಆದರೆ ಸರಣಿಯ ಮೂರು ಪಂದ್ಯಗಳಲ್ಲಿಯೂ ಮೊದಲ ಎಸೆತಕ್ಕೆ ಔಟಾಗಿರುವವರು ಬೇರೆ ಯಾರಾದರು ಇದ್ದಾರೋ ಎಂಬುದು ನನಗೆ ತಿಳಿದಿಲ್ಲ. ಆದರೆ ನಾವೆಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇವೆ" ಎಂದಿದ್ದಾರೆ ರಿಕಿ ಪಾಂಟಿಂಗ್.
ಕಳೆದ ಫೆಬ್ರವರಿಯಲ್ಲಿ ಏಕದಿನ ಮಾದರಿಯಲ್ಲಿ ಕೊನೆಯ ಅರ್ಧ ಶತಕ ಸಿಡಿಸಿದ ಬಳಿಕ ಸೂರ್ಯಕುಮಾರ್ ಯಾದವ್ 12.28ರ ಸರಾಸರಿಯಲ್ಲಿ 172 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಕಳಪೆ ಫಾರ್ಮ್‌ನ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಬೆಂಬಲಕ್ಕೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿಲ್ಲಬೇಕು ಎಂದು ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ.
"ಅವರ ಹಿಂದಿನ 12-18 ತಿಂಗಳ ಅವಧಿ ಅತ್ಯದ್ಭುತವಾಗಿತ್ತು. ವಿಶ್ವದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ಸೂರ್ಯಕುಮಾರ್ ಯಾದವ್ ಏನು ಮಾಡಲಿದ್ದಾರೆ ಎಂಬುದರ ಅರಿವಿತ್ತು" ಎಂದು ಪಾಂಟಿಂಗ್ ಹೇಳಿದ್ದಾರೆ. ಮುಂದುವರಿದು ಅವರು "ಸೂರ್ಯಕುಮಾರ್ ಯಾದವ್ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯಹೊಂದಿರುವ ಬೌಲರ್. ಸದ್ಯ ಆತ ಅಸ್ಥಿರ ಪ್ರದರ್ಶಣ ನೀಡುತ್ತಿಬಹುದು. ಆದರೆ ದೊಡ್ಡ ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲ ಆಟಗಾರ ಆತ. ಆಸ್ಟ್ರೇಲಿಯಾದ ದಿವಂಗತ ಆಟಗಾರ ಆಂಡ್ರ್ಯೋ ಸೈಮಂಡ್ಸ್ ರೀತಿಯ ಆಟಗಾರ" ಎಂದಿದ್ದಾರೆ ರಿಕಿ ಪಾಂಟಿಂಗ್.