ರಿಷಭ್ ಪಂತ್ ಖಂಡಿತವಾಗಿ ಧೋನಿಯನ್ನು ಮೀರಿಸಬಲ್ಲ ಎಂದು ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ

ಕ್ರಿಕೆಟ್ ಜಗತ್ತಿನಲ್ಲಿ ನಡೆಯುವ ಪ್ರತೀ ಸರಣಿ ಮತ್ತು ಟೂರ್ನಿಗಳಲ್ಲಿಯೂ ನೂತನ ದಾಖಲೆಗಳು ಹಾಗೂ ಮೈಲಿಗಲ್ಲುಗಳು ಸೃಷ್ಟಿಯಾಗುತ್ತವೆ ಮತ್ತು ಅದೇ ಸಮಯಕ್ಕೆ ಹಳೆಯ ದಾಖಲೆ ಹಾಗೂ ಮೈಲಿಗಲ್ಲುಗಳು ಪುಡಿ ಪುಡಿಯಾಗುತ್ತವೆ. ಆಟಗಾರನೋರ್ವ ನೂತನ ದಾಖಲೆಯನ್ನು ನಿರ್ಮಿಸಿದಾಗ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಆದರೆ, ಅಂತಹ ಹಲವಾರು ದಾಖಲೆಗಳನ್ನು ಈಗಾಗಲೇ ಹಲವು ಆಟಗಾರರು ನಿರ್ಮಿಸಿದ್ದು, ಆ ಹಿಂದಿನ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅದರಲ್ಲಿಯೂ ಈಗಿನ ಕೆಲ ಯುವ ಕ್ರಿಕೆಟಿಗರು ಹಿರಿಯ ಕ್ರಿಕೆಟಿಗರ ಹಲವು ದೊಡ್ಡ ದಾಖಲೆಗಳನ್ನು ಮುರಿದು ಹಾಕುತ್ತಿದ್ದು, ಹೊಸ ಇತಿಹಾಸಗಳನ್ನು ನಿರ್ಮಿಸುತ್ತಿದ್ದಾರೆ. ಇಂತಹ ಪಟ್ಟಿಗೆ ಸೇರುವ ಯುವ ಕ್ರಿಕೆಟಿಗರಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಓರ್ವರು.
ಹೌದು, ಪ್ರಸ್ತುತ ಭಾರತ ತಂಡದ ವಿಕೆಟ್ ಕೀಪರ್ ಆಗಿರುವ ರಿಷಭ್ ಪಂತ್ ತನ್ನ ಹಿರಿಯ ಕ್ರಿಕೆಟಿಗ ಎಂ ಎಸ್ ಧೋನಿಯವರ ಸಾರ್ವಕಾಲಿಕ ರನ್ ಹಾಗೂ ಕ್ಯಾಚ್ ದಾಖಲೆಯನ್ನು ಮುರಿಯಲಿದ್ದಾರೆ ಎಂಬ ಅಭಿಪ್ರಾಯವನ್ನು ಈಗಾಗಲೇ ಹಲವಾರು ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರೂ ಸಹ ವ್ಯಕ್ತಪಡಿಸಿದ್ದು, ಈ ಅಭಿಪ್ರಾಯಗಳಿಗೆ ಟೀಕೆಗಳೂ ಕೂಡ ವ್ಯಕ್ತವಾಗಿವೆ. ಎಂಎಸ್ ಧೋನಿ ಓರ್ವ ದಂತಕತೆ, ಅವರ ಜೊತೆ ಈಗಿನ ಕ್ರಿಕೆಟಿಗರನ್ನು ಹೋಲಿಕೆ ಮಾಡಬೇಡಿ ಎಂದು ಎಂಎಸ್ ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದರ ನಡವೆಯೇ ಇದೀಗ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ರಿಷಭ್ ಪಂತ್ ಎಂಎಸ್ ಧೋನಿಗಿಂತ ಉತ್ತಮ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಆಗಬಲ್ಲ ಎಂಬ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಪಂತ್ ಧೋನಿಯನ್ನು ಮೀರಿಸುವುದು ಖಚಿತ
ಇತ್ತೀಚಿಗಷ್ಟೆ ನಡೆದ ಕ್ರಿಕೆಟ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ಭಾರತ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ರಿಷಭ್ ಪಂತ್ ಕುರಿತು ಮಾತನಾಡಿದ್ದು, " ಹೌದು, ಪಂತ್ ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿಗಿಂತಲೂ ಉತ್ತಮ ವಿಕೆಟ್ ಕೀಪರ್-ಬ್ಯಾಟರ್ ಆಗಬಲ್ಲರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈಗಾಗಲೇ ಕೆಲವು ಅದ್ಭುತವಾದ ಪ್ರದರ್ಶನಗಳನ್ನು ರಿಷಭ್ ಪಂತ್ ನೀಡಿದ್ದು, ಮುಂಬರುವ 8-10 ವರ್ಷಗಳಲ್ಲಿ ಅವರು ಹೆಚ್ಚು ಪ್ರಬುದ್ಧರಾಗುತ್ತಾರೆ ಮತ್ತು ಹೆಚ್ಚಿನ ಅನುಭವದೊಂದಿಗೆ ಅವರು ಖಂಡಿತವಾಗಿಯೂ ಧೋನಿಗಿಂತ ಉತ್ತಮವಾಗುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ ಅಂಕಿಅಂಶ
ಎಂಎಸ್ ಧೋನಿ ಇದುವರೆಗೂ ಒಟ್ಟು 90 ಟೆಸ್ಟ್ ಪಂದ್ಯಗಳನ್ನಾಡಿದ್ದು, 4876 ರನ್‌ಗಳನ್ನು ಬಾರಿಸಿದ್ದಾರೆ. ಹಾಗೂ ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 6 ಶತಕ ಹಾಗೂ 33 ಅರ್ಧಶತಕಗಳನ್ನು ಸಿಡಿಸಿದ್ದು, ಏಷ್ಯ ಹೊರತುಪಡಿಸಿ ಇತರೆ ದೇಶಗಳಲ್ಲಿ ಎಲ್ಲೂ ಧೋನಿ ಟೆಸ್ಟ್ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿಲ್ಲ. ಇನ್ನು ಈ ಟೆಸ್ಟ್ ಪಂದ್ಯಗಳ ಪೈಕಿ 256 ಕ್ಯಾಚ್ ಹಿಡಿದು, 38 ಸ್ಟಂಪ್ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಎಸ್ ರಿಷಭ್ ಪಂತ್ ಅಂಕಿಅಂಶ
ರಿಷಭ್ ಪಂತ್ ಇದುವರೆಗೂ ಒಟ್ಟು 30 ಟೆಸ್ಟ್ ಪಂದ್ಯಗಳನ್ನಾಡಿದ್ದು, 1920 ರನ್ ಗಳಿಸಿದ್ದಾರೆ ಹಾಗೂ 4 ಶತಕಗಳನ್ನು ಸಿಡಿಸಿದ್ದು, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಭಾರತ ನೆಲದಲ್ಲಿ ತಲಾ ಒಂದೊಂದು ಶತಕವನ್ನು ಸಿಡಿಸಿದ್ದಾರೆ. ಇನ್ನು ಪಂತ್ 107 ಕ್ಯಾಚ್‌ಗಳನ್ನು ಹಿಡಿದಿದ್ದು, 11 ಸ್ಟಂಪ್ ಮಾಡಿದ್ದಾರೆ. ಇನ್ನು ರಿಷಭ್ ಪಂತ್ ಇನ್ನೂ 24 ವಯಸ್ಸಿನವರಾಗಿರುವುದರಿಂದ ಎಂಎಸ್ ಧೋನಿಯ ಟೆಸ್ಟ್ ದಾಖಲೆಯನ್ನು ಮುರಿಯುವ ಸಾಧ್ಯತೆಗಳು ಹೆಚ್ಚಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications