
ಹೈದರಾಬಾದ್, ಮೇ 09: ಸನ್ ರೈಸರ್ಸ್ ಹೈದರಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಬುಧವಾರ ನಡೆದ ಐಪಿಎಲ್ 2019ರ ಮೊದಲ ಎಲಿಮಿನೇಟರ್ ಪಂದ್ಯದ ಸಾಕಷ್ಟು ನಾಟಕೀಯ ದೃಷ್ಯಗಳಿಗೆ ಸಾಕ್ಷಿಯಾಯಿತು. ಜಿದ್ದಾಜಿದ್ದಿನ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಅಂತಿಮವಾಗಿ ಡೆಲ್ಲಿ ತಂಡ 2 ವಿಕೆಟ್‌ಗಳಿಂದ ಗೆದ್ದು ಎಲಿಮಿನೇಟರ್ 2 ಪಂದ್ಯಕ್ಕೆ ಮುನ್ನಡೆಯಿತು.
ಇನ್ನು ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹೈದರಾಬಾದ್ ತಂಡ ಬ್ಯಾಟಿಂಗ್ ನಡೆಸುವಾಗ ಕೊನೆಯ ಓವರ್‌ನಲ್ಲಿ ಸಂಪೂರ್ಣ ಹೈ ಡ್ರಾಮಾ ನಡೆಯಿತು. ಕೀಮೊ ಪೌಲ್ ಎಸೆದ ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಸ್ಟ್ರೈಕ್ ಎಂಡ್ ಕಡೆಯಿಂದ ನಾನ್ ಸ್ಟ್ರೈಕ್ ಕಡೆಗೆ ಓಡುತ್ತಿದ್ದ ದೀಪಕ್ ಹೂಡ (4) ಅವರನ್ನು ವಿಕೆಟ್‌ಕೀಪರ್ ರಿಷಭ್ ಪಂತ್ ರನ್ ಔಟ್ ಮಾಡಿದ್ದರು.
ಚೆಂಡನ್ನು ಬ್ಯಾಟಿಗೆ ತಾಗಿಸದೇ ಒಂದು ರನ್ ಕದುಯಲು ಪ್ರಯತ್ನಿಸಿದ ಹೂಡ, ನಾನ್ ಸ್ಟ್ರೈಕ್ ತುದಿಗೆ ಓಡುವಾಗ ಬೌಲರ್ ಕೀಮೊ ಪೌಲ್‌ಗೆ ಡಿಕ್ಕಿ ಹೊಡೆದು ಪಿಚ್ ಮಧ್ಯದಲ್ಲೇ ಬಿದ್ದರು. ಇದೇ ವೇಳೆ ಎಚ್ಚೆತ್ತುಕೊಂಡ ಪಂತ್ ಚೆಂಡನ್ನು ನಾನ್ ಸ್ಟ್ರೈಕ್ ತುದಿಯ ಸ್ಟಂಪ್ಸ್‌ಗೆ ಹೊಡೆದಿದ್ದರು. ಅಂಪೈರ್‌ಗಳು ಹೂಡ ರನ್‌ಔಟ್ ಎಂದು ನಿರ್ಧಾರ ನೀಡಿದ್ದರು.
ಆದರೆ, ಬ್ಯಾಟ್ಸ್‌ಮನ್ ಓಡುವಾಗ ಬೌಲರ್‌ಗೆ ಡಿಕ್ಕಿ ಹೊಡೆದು ಬಿದ್ದ ಕಾರಣ ನಾಯಕ ಶ್ರೇಯಸ್ ಅಯ್ಯರ್ ರನ್ ಔಟ್ ಮನವಿಯನ್ನು ಹಿಂಪಡೆದರು. ಕ್ರೀಡಾ ಸ್ಫೂರ್ತಿ ಮೆರೆಯುವ ಉದಾರತೆಗೆ ಮುಂದಾದ ಅಯ್ಯರ್ ಎದುರಾಳಿ ಬ್ಯಾಟ್ಸ್‌ಮನ್‌ಗೆ ಆಟ ಮುಂದುವರಿಸುವ ಅವಕಾಶ ಮಾಡಿಕೊಟ್ಟರು. ಆದರೆ ಕೂಡಲೇ ಮಧ್ಯ ಪ್ರವೇಶಿಸಿದ ಪಂತ್, ದೀಪಕ್ ಹೂಡ ಪಿಚ್ ಮಧ್ಯದಲ್ಲಿ ಓಡುತ್ತಿದ್ದರು. ಹೀಗಾಗಿ ಇದು ನಿಯಮಗಳ ಪ್ರಯಾರ ನ್ಯಾಯಯುತ ರನ್ ಔಟ್ ಎಂಬುದನ್ನು ಶ್ರೇಯಸ್‌ಗೆ ಮನವರಿಕೆ ಮಾಡಿಕೊಟ್ಟರು
ಟೆಲಿವಿಷನ್ ರೀಪ್ಲೇಯಲ್ಲೂ ಹೂಡ ಪಿಚ್ ಮಧ್ಯದಲ್ಲಿ ಓಡುತ್ತಿರುವುದು ಪ್ರಸಾರವಾಗಿ ಶ್ರೇಯಸ್ ತಮ್ಮ ನಿರ್ಧಾರ ಬದಲಾಯಿಸಿದರು. ಪರಿಣಾಮ ಕೆಲಕಾಲ ನಾಟಕ ನಡೆದರೂ ಹೂಡ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುವಂತಾಯಿತು. ಕ್ರಿಕೆಟ್ ವೀಕ್ಷಕ ವಿವರಣೆ ಒದಗಿಸುತ್ತಿದ್ದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೂಡ ಪಂತ್ ಅವರ ನಿರ್ಧಾರವನ್ನು ಪ್ರಶಂಶಿಸಿದರು.
ಒಂದು ವೇಳೆ ಹೂಡಾ ಆಟ ಮುಂದುವರಿಸಿದ್ದರೆ, ಒಂದೆರಡು ದೊಡ್ಡ ಹೊಡೆತಗಳನ್ನಾಡಿ ತಂಡದ ಮೊತ್ತವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇತ್ತು. ಇದು ಸಾಧ್ಯವಾಗಿದ್ದಲ್ಲಿ ಕೇವಲ 2 ವಿಕೆಟ್‌ಗಳಿಂದ ಗೆದ್ದ ಡೆಲ್ಲಿ ತಂಡಕ್ಕೆ ತನ್ನ ಇನಿಂಗ್ಸ್ ಅಂತ್ಯದಲ್ಲಿ ಈ ನಿರ್ಧಾರದ ದುಷ್ಪರಿಣಾಮ ಎದುರಿಸುವಂತಾಗುತ್ತಿತ್ತು.
ಈ ನಿಟ್ಟಿನಲ್ಲಿ ಡೆಲ್ಲಿ ತಂಡ ಪಂತ್‌ಗೆ ಧನ್ಯವಾದ ಹೇಳಬೇಕು. ಆಟದಲ್ಲಿ ಒಂದೊಂದು ರನ್ ರಕ್ಷಿಸುವುದು ಕೂಡ ಅತ್ಯಮೂಲ್ಯ ಎಂಬುದನ್ನು ನಾಯಕ ಶ್ರೇಯಸ್‌ಗೆ ಪಂತ್ ಮನವರಿಕೆ ಮಾಡಿಕೊಟ್ಟಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ 8 ವಿಕೆಟ್‌ಗೆ 162 ರನ್‌ಗಳನ್ನು ಗಳಿಸಿದರೆ, ಡೆಲ್ಲಿ ತಂಡ 19.5 ಓವರ್‌ಗಳಲ್ಲಿ ಅಷ್ಟೇ ವಿಕೆಟ್‌ಗಳನ್ನು ಕೈಚೆಲ್ಲಿ 165 ರನ್‌ಗಳನ್ನು ಗಳಿಸುವ ಮೂಲಕ ಗೆಲುವಿನ ನಿಟ್ಟುಸಿರು ಬಿಟ್ಟಿತು.
ಇನ್ನು 2012ರ ಬಳಿಕ ಮೊದಲ ಬಾರಿ ಪ್ಲೇ ಆಫ್ಸ್ ಹಂತ ತಲುಪಿರುವ ಬಹುತೇಕ ಯುವ ಆಟಗಾರರನ್ನು ಒಳಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶುಕ್ರವಾರ ನಡೆಯಲಿರುವ ಎಲಿಮಿನೇಟರ್ 2 (ಸೆಮಿಫೈನಲ್ಸ್ ಮಹತ್ವದ) ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಪ್ರಶಸ್ತಿ ಸುತ್ತಿನ ಪ್ರವೇಶಕ್ಕಾಗಿ ಇಲ್ಲಿನ ವಿಡಿಸಿಎ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.