ರೋಚಕ ಹೋರಾಟದಲ್ಲಿ ಇಂಗ್ಲೆಂಡ್‌ಗೆ 6 ರನ್‌ಗಳಿಂದ ಶರಣಾದ ಇಂಡಿಯಾ ಲೆಜೆಂಡ್ಸ್

ಇಂಡಿಯಾ ಲೆಜೆಂಡ್ಸ್ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ನಡುವೆ ನಡೆದ ರೋಚಕ ಕಾದಾಟದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡ ನೀಡಿದ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಅಂತಿಮ ಹಂತದವರೆಗೂ ಹೋರಾಡಿ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದ ಭಾರತ ಲೆಜೆಂಡ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲಿಗೆ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಲೆಜೆಂಡ್ಸ್ ತಂಡದ ಪರವಾಗಿ ನಾಯಕ ಕೆವಿನ್ ಪಿಟರ್ಸನ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 37 ಎಸೆತಗಳಲ್ಲಿ ಪೀಟರ್ಸನ್ 75 ರನ್‌ಗಳನ್ನು ಸಿಡಿಸಿ ಭಾರತ ದಿಗ್ಗಜರ ತಂಡಕ್ಕೆ ಸವಾಲಾದರು. ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದರು.

189 ರನ್‌ಗಳ ಗುರಿ ನೀಡಿದ ಪೀಟರ್ಸನ್ ಪಡೆ
ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಲೆಜೆಂಡ್ಸ್ ತಂಡ 188 ರನ್ ಗಳಿಸಲು ಶಕ್ತವಾಯಿತು. ಭಾರತ ತಂಡದ ಪರವಾಗಿ ಯೂಸುಫ್ ಪಠಾಣ್ 3 ವಿಕೆಟ್ ಕಿತ್ತು ಮಿಂಚಿದರೆ, ಇರ್ಫಾನ್ ಹಾಗೂ ಮುನಾಫ್ ಪಟೇಲ್ ತಲಾ 2 ವಿಕೆಟ್ ಪಡೆದರು.

ಅಗ್ರ ಕ್ರಮಾಂಕದ ನೀರಸ ಪ್ರದರ್ಶನ
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಡಿಯಾ ಲೆಜೆಂಡ್ಸ್ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ವೀರೇಂದ್ರ ಸೆಹ್ವಾಗ್ 6 ರನ್‌ಗಳಿಸಿ ಔಟಾದರೆ ಮೊಹಮ್ಮದ್ ಕೈಫ್ ಒಂದು ರನ್‌ಗಳಿಸಿ ಮಾಂಟಿ ಪನೆಸರ್‌ಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಸಚಿನ್ ತೆಂಡೂಲ್ಕರ್ ಕೂಡ ಸ್ಟಂಪ್ ಔಟ್ ಆಗುವ ಮೂಲಕ ಪನೆಸರ್‌ಗೆ ಬಲಿಯಾದರು. ಯುವರಾಜ್ ಸಿಂಗ್ 22 ರನ್‌ಗಳ ಕೊಡುಗೆಯನ್ನು ನೀಡಿದರು.

ಜೊತೆಯಾದ ಇರ್ಫಾನ್- ಗೋನಿ
ಎಸ್ ಬದ್ರಿನಾಥ್ ಹಾಗೂ ಯುಸೂಫ್ ಪಠಾಣ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಆದರೆ ಇರ್ಫಾನ್ ಪಠಾಣ್ ಕೆಳ ಕ್ರಮಾಂಕದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿದರು. ನಮನ್ ಓಜಾ ಔಟಾದರೂ ಕೂಡ ಬಳಿಕ ಬಂದ ಮನ್‌ಪ್ರೀತ್ ಗೋನಿ ಭರ್ಜರಿ ಸಾಥ್ ನೀಡಿದರು.

ಅಂತಿಮ ಹಂತದವರೆಗೂ ಹೋರಾಟ
ಇರ್ಫಾನ್ ಪಠಾಣ್ ಹಾಗೂ ಮನ್‌ಪ್ರೀತ್ ಜೋಡಿಯ ಸ್ಫೋಟಕ ಪ್ರದರ್ಶನ ಭಾರತ ತಂಡಕ್ಕೆ ಗೆಲುವಿನ ಆಸೆಯನ್ನು ಮೂಡಿಸಿತು. ಅಂತಿಮ ಹಂತದವರೆಗೂ ಭಾರತದ ಹೋರಾಟ ಚಾಲನೆಯಲ್ಲಿರುವಂತೆ ಈ ಜೋಡಿ ನೋಡಿಕೊಂಡಿತ್ತು. ಅಂತಿಮ ಓವರ್‌ನಲ್ಲಿ ಭಾರತಕ್ಕೆ 19 ರನ್‌ಗಳ ಅವಶ್ಯಕತೆಯಿತ್ತು. ಆದರೆ ಭಾರತ 13 ರನ್ ಮಾತ್ರವೇ ಗಳಿಸಲು ಶಕ್ತವಾಗುವ ಮೂಲಕ 6 ರನ್‌ಗಳಿಂದ ಶರಣಾಯಿತು. ಇರ್ಫಾನ್ ಪಠಾಣ್ 34 ಎಸೆತಗಳಲ್ಲಿ 61 ರನ್ ಬಾರಿಸಿ ಅಜೇಯವಾಗುಳಿದರೆ, ಮನ್‌ಪ್ರೀತ್ ಗೋನಿ 16 ಎಸೆತಗಳಲ್ಲಿ 35 ರನ್ ಬಾರಿಸಿ ಅಜೇಯವಾಗುಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications