ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಮೆಂಟ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಆವೃತ್ತಿ ಅದ್ಭುತವಾಗಿ ನಡೆಯುತ್ತಿದೆ. ಒಂದು ಟ್ರೋಫಿಗಾಗಿ ಹತ್ತು ತಂಡಗಳು ಸೆಣಸಾಡುತ್ತಿವೆ.
ಐಪಿಎಲ್ ಶುರುವಾದ ನಂತರ ಸತತ ನಾಲ್ಕು ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಮುಂಬೈ ಇಂಡಿಯನ್ಸ್ ತಂಡವು ತನ್ನ ಸಂಫಟಿತ ಆಟದಿಂದ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿ ಚೇತರಿಕೆ ಕಂಡಿದೆ. ಕಳೆದ ಮೂರು ಪಂದ್ಯಗಳನ್ನು ಗೆದ್ದು ಮುನ್ನಡೆಯುತ್ತಿರುವ ಮುಂಬೈ ಪ್ರಸ್ತುತ 6ನೇ ಸ್ಥಾನದಲ್ಲಿದೆ.

ಐದು ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮುಂಬೈ ಈ ಆವೃತ್ತಿಯ ಐಪಿಎಲ್‌ನಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ತಂಡದಲ್ಲಿನ ಒಗ್ಗಟ್ಟಿನ ಕೊರತೆ, ಅಸಮಾಧಾನದ ಹೊಗೆ ಮುಂಬೈ ಗೆಲುವಿಗೆ ಅಡ್ಡಿಯಾಗುತ್ತಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೊಸ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮುಂಬೈ ನಾಯಕನ ಬದಲಾವಣೆ ಎಂಬುದು ಮೇಲೋಟದ ಸಂಗತಿಯಾಗಿದೆ.
ಹೌದು.. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಫ್ರಾಂಚೈಸಿ ಟ್ರೇಡ್ ಮಾಡಿತ್ತು. ಬಳಿಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ಜವಾಬ್ದಾರಿಯನ್ನು ಮುಂಬೈ ಫ್ರಾಂಚೈಸಿ ವಹಿಸಿತ್ತು.
ಆದರೇ ಯಾವ ಕಾರಣಕ್ಕೆ ರೋಹಿತ್ ಶರ್ಮಾ ಅವರ ನಾಯಕತ್ವ ಕಸಿದುಕೊಳ್ಳಲಾಯಿತು ಎಂಬ ಬಗ್ಗೆ ಎಲ್ಲಿಯೂ ಮುಂಬೈ ಫ್ರಾಂಚೈಸಿ ಬಹಿರಂಗಪಡಿಸಲಿಲ್ಲ. ಇತ್ತ ಹಾರ್ದಿಕ್ ಪಾಂಡ್ಯ ಅವರಿಗೂ ಸಂದರ್ಶನವೊಂದರಲ್ಲಿ ನಾಯಕನ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದಾಗಲೂ ಉತ್ತರಿಸದೆ ಜಾರಿಗೊಂಡಿದ್ದರು.
ಈ ಎಲ್ಲಾ ಬೆಳವಣಿಗೆಯಿಂದ ಸಿಡಿಮಿಡಿಗೊಂಡ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿರುದ್ಧ ಮೈದಾನದ ಹೊರಗೆ ಮತ್ತು ಒಳಗೆ ಆಕ್ರೋಶ ಹೊರಹಾಕಿದ್ದರು. ಇದೀಗ ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು, ಮುಂಬೈ ಕ್ಯಾಪ್ಟನ್ಸಿ ಗೊಂದಲದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಅವರ ಕಳೆದ ಋತುಗಳಲ್ಲಿನ ಫಾರ್ಮಾ ಬಗ್ಗೆ ಕೂಡ ರಾಬಿನ್ ಉತ್ತಪ್ಪ ಹೇಳಿದ್ದಾರೆ.
2020ರ ನಂತರ ಮುಂಬೈ ಪರ ರೋಹಿತ್ ಶರ್ಮಾ 300 ರನ್‌ಗಳ ಮೇಲೆ ಸ್ಕೋರ್ ಮಾಡಿಲ್ಲ. ಜೊತೆಗೆ ಯಾವುದೇ ಟ್ರೋಫಿ ಸಿಕ್ಕಿಲ್ಲ. ಇದೆಲ್ಲ ಗಮನಿಸಿರುವ ಫ್ರಾಂಚೈಸಿ ರೋಹಿತ್ ನಂತರ ಮುಂಬೈಗೆ ನಾಯಕ ಯಾರು ಎಂದು ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿದೆ. ಪ್ರಾಂಚೈಸಿ ದೃಷ್ಟಿಯಿಂದ ನೋಡಿದಾಗ ಈ ಪ್ರಕ್ರಿಯೆ ತಪ್ಪು ಎನ್ನಲಾಗದು ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕ್ರಿಕೆಟ್ ಗಲ್ಲಿಯಲ್ಲಿಯೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಗುಜರಾತ್ ತಂಡವು ಕಳೆದ ಎರಡು ಋತುಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಒಂದು ಬಾರಿ ಚಾಂಪಿಯನ್ ಆಗಿದ್ದು, ಕಳೆದ ಬಾರಿ ರನ್ನರ್ ಆಪ್ ಆಗಿ ಹೊರಹೊಮ್ಮಿದೆ.