2024ರ ಐಪಿಎಲ್‌ನ ಇತ್ತೀಚಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೇವಲ 1 ರನ್ ಅಂತರದಲ್ಲಿ ಸೋತಿದ್ದರಿಂದ, ಈ ಋತುವಿನಲ್ಲಿ ಅತ್ಯಂತ ಕೆಟ್ಟ ಅಭಿಯಾನ ಹೊಂದಿದೆ.
ಐಪಿಎಲ್ 2024ರಲ್ಲಿ ಆರ್‌ಸಿಬಿ ತಂಡ ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವಿನೊಂದಿಗೆ ಪ್ರಸ್ತುತ 10 ತಂಡಗಳ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.

ಅತ್ಯಂತ ಲಾಯಲ್ ಮತ್ತು ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ಫ್ರಾಂಚೈಸಿ ಯಾವಾಗಲೂ ದೊಡ್ಡ ಆಟಗಾರರ ಬಗ್ಗೆ ಹೆಮ್ಮೆಪಡುತ್ತದೆ. ಆದರೆ ಒಮ್ಮೆ ಕೂಡ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿದೆ.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಅವರು ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರನ್ನು ಮುಂದಿನ ವರ್ಷಗಳಲ್ಲಿ ಮರಳಿ ಕರೆತರುವಂತೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ.
"ಮೊದಲು ಆರ್‌ಸಿಬಿ ಯುಜ್ವೇಂದ್ರ ಚಾಹಲ್‌ಗೆ ಹಿಂತಿರುಗಿ ಬರುವಂತೆ ಬೇಡಿಕೊಳ್ಳಬೇಕು. ಇದಕ್ಕಾಗಿ ಏನು ಬೇಕಾದರೂ ಮಾಡಿ. ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಹೋಗಿ ಯುಜ್ವೇಂದ್ರ ಚಹಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್‌ನಿಂದ ಮರಳಿ ಕರೆತರಲು, ತಿದ್ದುಪಡಿ ಮಾಡಿ. ನಾನಾಗಿದ್ದರೆ ಬಹುಶಃ ಹರ್ಷಲ್ ಪಟೇಲ್ ಅವರನ್ನು ಮರಳಿ ಕರೆತಂದು, ಆರ್‌ಸಿಬಿ ಬೌಲಿಂಗ್ ವಿಭಾಗ ಯಶಸ್ವಿಯಾಗಲು ಅನುಕೂಲಕರವಾದ ಪರಿಸ್ಥಿತಿಯನ್ನು ಸಿದ್ಧಪಡಿಸುತ್ತೇನೆ," ಎಂದು ರಾಬಿನ್ ಉತ್ತಪ್ಪ ಹೇಳಿದರು.

"ಆರ್‌ಸಿಬಿ ತಂಡದಲ್ಲಿ ಬ್ಯಾಟರ್‌ಗಳನ್ನು ನೋಡಿ, ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಅವರಂತಹವರು ಇದ್ದಾರೆ. ಆದರೆ ಬೌಲರ್‌ಗಳು?. ಆರ್‌ಸಿಬಿ ಅಂತಹ ಶ್ರೇಷ್ಠ ಬ್ಯಾಟರ್‌ಗಳನ್ನು ಹೊಂದಿದ್ದರು. ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಅವರಂತಹ ದಿಗ್ಗಜರು ಆಡಿದರು. ಅಲ್ಲದೆ ಟ್ರಾವಿಸ್ ಹೆಡ್, ಶೇನ್ ವ್ಯಾಟ್ಸನ್ ಕೂಡ ಆರ್‌ಸಿಬಿ ಪರ ಪರವಾಗಿ ಆಡಿದರು," ಎಂದು ರಣವೀರ್ ಶೋ ಪಾಡ್‌ಕಾಸ್ಟ್‌ನಲ್ಲಿ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಯುಜ್ವೇಂದ್ರ ಚಹಾಲ್ ಪ್ರಸ್ತುತ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಆದರೆ 2021ರ ಋತುವಿನ ನಂತರ ಆರ್‌ಸಿಬಿ ಅವರನ್ನು ಉಳಿಸಿಕೊಳ್ಳಲಿಲ್ಲ ಮತ್ತು ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿದರು.
"ಶಿವಂ ದುಬೆ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಆಟಗಾರರು ಕೂಡ ಉತ್ತಮ ಭರವಸೆಯನ್ನು ತೋರಿಸುತ್ತಿದ್ದಾರೆ. ಹೀಗಾಗಿ ಯುಜ್ವೇಂದ್ರ ಚಹಾಲ್ ಮಾತ್ರ ಆರ್‌ಸಿಬಿ ತೊರೆದು ಮತ್ತೊಂದು ಫ್ರಾಂಚೈಸಿಯೊಂದಿಗೆ ಯಶಸ್ವಿಯಾದ ಸ್ಟಾರ್ ಆಟಗಾರನಲ್ಲ. ಆರ್‌ಸಿಬಿ ಈ ಮಾದರಿಯನ್ನು ಮುರಿದು ತಂಡವು ತಮ್ಮ ದೊಡ್ಡ ಆಟಗಾರರನ್ನು ಹಿಡಿದಿಟ್ಟುಕೊಳ್ಳುವ ಅಗತ್ಯವಿದೆ," ಎಂದು ರಾಬಿನ್ ಉತ್ತಪ್ಪ ಹೇಳಿದರು.
"ಈಗ ನಾವು ದೇಶೀಯ ಆಟಗಾರರನ್ನು ನೋಡೋಣ. ಮನೀಶ್ ಪಾಂಡೆ, ನಾನು, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್... ಆರ್‌ಸಿಬಿ ಎಲ್ಲರನ್ನೂ ಬಿಟ್ಟುಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ನಂತರ ರಾಹುಲ್ ದ್ರಾವಿಡ್ ಆರ್‌ಸಿಬಿ ಪರ ಗರಿಷ್ಠ ಸ್ಕೋರರ್ ಆಗಿದ್ದಾರೆ".
"ಕೆಕೆಆರ್ ತಂಡ 2012, 2014ರಲ್ಲಿ ಐಪಿಎಲ್ ಟ್ರೋಫಿ ಗೆದ್ದಾಗ 170 ಗೆಲುವಿನ ಗುರಿಯಾಗಿತ್ತು. ನೀವು ರನ್ ಗಳಿಸಲು ಕಷ್ಟಪಡಬೇಕು. ಆರ್‌ಸಿಬಿಗೆ ಅದು ಸಾಧ್ಯವಿಲ್ಲ. ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ಹೂಡಿಕೆ ಮಾಡಿ ಮತ್ತು ಆಟಗಾರರನ್ನು ಉಳಿಸಿಕೊಳ್ಳಿ, ನಂಬಿಕೆಯನ್ನು ಚಲಾಯಿಸಿ. ಈ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ ಆಟಗಾರರ ಸಂಖ್ಯೆಯನ್ನು ನೋಡಿ. ಸುಮಾರು 25," ಎಂದು ಆರ್‌ಸಿಬಿ ಮಾಜಿ ಆಟಗಾರ ರಾಬಿನ್ ಉತ್ತಪ್ಪ ತಿಳಿಸಿದರು.