ಈ ಯುವ ಪ್ರತಿಭೆಗಳನ್ನು ನಿರ್ಲಕ್ಷಿಸಿ ಭಾರತದ ಟಿ20 ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿದ ರೋಹಿತ್

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತು.
ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಯಾವ ಹಂತದಲ್ಲಿಯೂ ಎದುರಾಳಿ ತಂಡಕ್ಕೆ ಹೋರಾಟ ನೀಡಲೇ ಇಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಯಾವ ರೀತಿ ಆಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ಮೈದಾನದಲ್ಲಿ ಸುಲಭವಾಗಿ ಪಂದ್ಯವನ್ನು ಕೈಚೆಲ್ಲಿದರು. ಕನಿಷ್ಟ ಒಂದು ವಿಕೆಟ್ ಪಡೆಯಲೂ ಭಾರತೀಯ ಬೌಲರ್‌ಗಳು ವಿಫಲರಾದರು.
ತಂಡದ ಆಯ್ಕೆಯಲ್ಲಿ ಮಾಡಿದ ಕೆಲವು ಎಡವಟ್ಟುಗಳಿಂದ ಅತಿಯಾದ ಆತ್ಮವಿಶ್ವಾಸದಿಂದ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಭಾರತಕ್ಕೆ ಆಂಗ್ಲರು ಬಿಸಿಮುಟ್ಟಿಸಿದರು. ಈ ರೀತಿಯಾಗಿ ವಿಶ್ವ ಕ್ರಿಕೆಟ್ ಎದುರು ತನ್ನ ಮಾನ ಹರಾಜು ಹಾಕಿಕೊಂಡ ನಂತರ, ಇದೀಗ ಟೀಂ ಇಂಡಿಯಾ ಹಲವು ಪಾಠಗಳನ್ನು ಕಲಿಯಬೇಕಿದೆ ಮತ್ತು ಕಲಿತಿದೆ.
2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಹೃದಯ ವಿದ್ರಾವಕ ಸೋಲಿನ ನಂತರ ಭಾರತ ತಂಡ ಹಲವು ಪಾಠಗಳನ್ನು ಕಲಿತಿದ್ದು, ಮುಂದಿನ ವಿಶ್ವಕಪ್‌ಗೆ ವೇಳೆಗೆ ಯುವ ತಂಡವನ್ನು ಕಟ್ಟಲು ಮತ್ತು ವಿಶ್ವ ವೇದಿಕೆಯ ಪಂದ್ಯಾವಳಿಗಳಿಗಳಿಗೆ ತಯಾರಾಗಲು ಅಳವಡಿಸಿಕೊಳ್ಳಬೇಕಾದ ಅಂಶಗಳು ಇಲ್ಲಿವೆ.

ಹೊಸ ಟಿ20 ಬ್ಯಾಟಿಂಗ್ ವಿಧಾನದ ಬಗ್ಗೆ ಮಾತನಾಡಿದ್ದ ರೋಹಿತ್ ಶರ್ಮಾ
ಈ ಬಾರಿಯ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೊಸ ಟಿ20 ಬ್ಯಾಟಿಂಗ್ ವಿಧಾನದ ಬಗ್ಗೆ ಮಾತನಾಡಿದ್ದರು, ಭಾರತ ತಂಡ ಅದನ್ನು ಟಿ20 ವಿಶ್ವಕಪ್‌ಗೆ ಮುನ್ನ ದ್ವಿಪಕ್ಷೀಯ ಸರಣಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತೋರಿಸಿದರು. ಆದರೆ ಆಸ್ಟ್ರೇಲಿಯಾದ ವಿಶ್ವಕಪ್ ವೇಳೆಗೆ ಆಕ್ರಮಣಕಾರಿ ಬ್ಯಾಟಿಂಗ್ ವಿಧಾನ ಮಾಯವಾಗಿತ್ತು.
ವಿಪರ್ಯಾಸವೆಂದರೆ, ಹೊಸ ಟಿ20 ಬ್ಯಾಟಿಂಗ್ ವಿಧಾನ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಅವರು ಆಡುವ ಅಗ್ರ ಕ್ರಮಾಂಕದಲ್ಲಿಯೇ ಕಾಣಿಸಲಿಲ್ಲ. ಈ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಮಾತ್ರವಲ್ಲದೆ, ಈ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭಕ್ಕೆ ಒದಗಿಸಲೂ ಹೆಣಗಾಡಿದರು.

ಪವರ್‌ಪ್ಲೇಯೊಳಗೆ ಮೊದಲ ವಿಕೆಟ್ ಉರುಳುತ್ತಿತ್ತು
ಪ್ರತಿ ಪಂದ್ಯದಲ್ಲೂ ಪವರ್‌ಪ್ಲೇಯೊಳಗೆ ಮೊದಲ ವಿಕೆಟ್ ಉರುಳುತ್ತಿತ್ತು. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನುದ್ದಕ್ಕೂ ಯಾವುದೇ ರೀತಿಯ ಉತ್ತಮ ಆರಂಭ ನೀಡಲು ವಿಫಲರಾದರು. ಟಿ20 ಹೋಗಲಿ, ಏಕದಿನ ಪಂದ್ಯಕ್ಕೂ ಲಾಯಕ್ಕಿಲ್ಲದ ಬ್ಯಾಟಿಂಗ್ ಮಾಡಿದರು. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ನಲ್ಲಿ ರನ್ ಇರಲಿಲ್ಲ, ಸ್ಟ್ರೈಕ್ ರೇಟ್ ಇರಲಿಲ್ಲ ಮತ್ತು ಉದ್ದೇಶವಂತೂ ಮೊದಲೇ ಇರಲಿಲ್ಲ.
ಇಡೀ ಟಿ20 ವಿಶ್ವಕಪ್‌ನಲ್ಲಿ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದವರೆಂದರೆ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್. ಒಂದೆರಡು ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲೂ ತಂಡಕ್ಕೆ ತಮ್ಮ ಕೊಡುಗೆ ನೀಡಿದರು. ಈ ಇಬ್ಬರು ಆಡಿರದಿದ್ದರೆ ಭಾರತ ಸೆಮಿಫೈನಲ್ ತಲುಪುವುದೂ ಕಷ್ಟವೆನಿಸಿತ್ತು. ಇನ್ನು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು.

ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ
ಇದೀಗ ಅಗ್ರ ಕ್ರಮಾಂಕದ ಬ್ಯಾಟಿಂಗ್ ಮತ್ತು ತಂಡದ ಆಕ್ರಮಣಕಾರಿ ವಿಧಾನದ ಬದಲಾವಣೆಯ ಬಗ್ಗೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಪರಿಶೀಲನೆ ಮಾಡಬೇಕಿದೆ. ಸದ್ಯದ ಫಾರ್ಮ್ ನೋಡಿದರೆ, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬಿಟ್ಟು ಉಳಿದವರಾರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಅರ್ಹರಲ್ಲ. ನಾಯಕ ರೋಹಿತ್ ಶರ್ಮಾ ಆದಿಯಾಗಿ ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ವಿಫಲರಾಗಿದ್ದು ತಂಡದ ಹಿನ್ನಡೆಗೆ ಕಾರಣವಾಗಿದೆ.
ಆಸ್ಟ್ರೇಲಿಯದ ಕಳೆದ ಎರಡು ಪ್ರವಾಸಗಳಲ್ಲಿ ಬ್ಯಾಟಿಂಗ್ ಕಲೆ ಕರಗತ ಮಾಡಿಕೊಂಡ ರಿಷಭ್ ಪಂತ್ ಈ ವಿಶ್ವಕಪ್‌ನಲ್ಲಿ ಬೆಂಚ್ ಕಾಯಿಸಿದ್ದು ಸಾಕಷ್ಟು ಗೊಂದಲದಿಂದ ಕೂಡಿತ್ತು. ಇದೀಗ ಆಗಿ ಹೋಗಿದ್ದರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಮುಂದಿನ ವಿಶ್ವಕಪ್‌ಗೆ ಇನ್ನೂ ಸಮಯವಿದ್ದು, ಪ್ರದರ್ಶನ ರಹಿತ ಆಟಗಾರರಿಗೆ ಗೇಟ್‌ಪಾಸ್ ನೀಡಿ ಯುವ ಆಟಗಾರರಿಗೆ ಮಣೆ ಹಾಕಬೇಕಿದೆ.

ಸಂಜು ಸ್ಯಾಮ್ಸನ್, ಪೃಥ್ವಿ ಶಾ ಮತ್ತು ಇಶಾನ್ ಕಿಶನ್ ಅವಕಾಶ ನೀಡಬೇಕಿದೆ
ಭಾರತೀಯ ತಂಡದ ಆಯ್ಕೆಗಾರರು ಇದೀಗ ಭಾರತ ಟಿ20 ತಂಡವನ್ನು ಮರಳಿ ಕಟ್ಟಬೇಕಿದೆ ಮತ್ತು ಸಂಜು ಸ್ಯಾಮ್ಸನ್, ಪೃಥ್ವಿ ಶಾ ಮತ್ತು ಇಶಾನ್ ಕಿಶನ್ ಅವರಂತಹ ಯುವ ಬ್ಯಾಟ್ಸ್‌ಮನ್ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಚಿಂತಿಸಬೇಕಿದೆ. ಈ ಮೂವರಿಗೆ ಅವಕಾಶ ನೀಡಿ ಅಗ್ರಕ್ರಮಾಂಕದಲ್ಲಿ ಬಳಸಿಕೊಳ್ಳಬೇಕು.
ಸಂಜು ಸ್ಯಾಮ್ಸನ್, ಪೃಥ್ವಿ ಶಾ ಮತ್ತು ಇಶಾನ್ ಕಿಶನ್ ಟಿ20 ಕ್ರಿಕೆಟ್‌ಗೆ ಹೇಳಿಮಾಡಿಸಿದ ಬ್ಯಾಟರ್‌ಗಳಾಗಿದ್ದಾರೆ. ಏಕೆಂದರೆ ಅವರು ಆಕ್ರಮಣಕಾರಿ ಬ್ಯಾಟರ್‌ಗಳಾಗಿದ್ದಾರೆ ಮತ್ತು ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ. ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಮುಂದಿನ ಪಾತ್ರದ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್‌ಗೆ ಗೊಂದಲ ಶುರುವಾಗಿದೆ.

ಟಿ20 ವಿಶ್ವಕಪ್ ಇನ್ನು ಕೇವಲ 2 ವರ್ಷಗಳ ದೂರ
ಟಿ20 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 135ರ ಸ್ಟ್ರೈಕ್ ರೇಟ್ ಹೊಂದಿದ್ದರೆ, ಇಶಾನ್ ಕಿಶನ್ 131ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪೃಥ್ವಿ ಶಾ ಐಪಿಎಲ್‌ನಲ್ಲಿ 147ರ ಸ್ಟ್ರೈಕ್‌ರೇಟ್‌ನೊಂದಿಗೆ ಬ್ಯಾಟ್ ಬೀಸಿದ್ದಾರೆ. ಆದರೂ ಈ ಮೂವರು ಯುವ ಆಟಗಾರರು ಮೇಲೆ ಆಯ್ಕೆ ಸಮಿತಿ ಕಣ್ಣು ಬೀಳಲಿಲ್ಲ.
ಮುಂದಿನ ಟಿ20 ವಿಶ್ವಕಪ್ ಇನ್ನು ಕೇವಲ 2 ವರ್ಷಗಳ ದೂರದಲ್ಲಿದೆ ಮತ್ತು ಆ ಮೂವರು ಟಿ20 ಪ್ರತಿಭೆಗಳನ್ನು ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಬಳಸಿಕೊಳ್ಳಬೇಕು ಮತ್ತು ಆ ವೇಳೆಗೆ ಭಾರತ ತಂಡದ ಬ್ಯಾಟಿಂಗ್ ವಿಧಾನವನ್ನು ಸರಿಯಾಗಿ ಅಳವಡಿಸಿಕೊಂಡು ವಿಶ್ವಕಪ್ ಗೆಲುವಿಗೆ ಕಟಿಬದ್ಧರಾಗಿರಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications