ಶನಿವಾರ, ಸೆಪ್ಟೆಂಬರ್ 2ರ ಮಧ್ಯಾಹ್ನ 3 ಗಂಟೆಗೆ ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ 2023ರ ಏಷ್ಯಾ ಕಪ್‌ನ 3ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಣ್ಣು ಬಿಟ್ಟು ಕಾಯುತ್ತಿರುತ್ತಾರೆ. ಕಳೆದ ಎರಡು ದಿನಗಳಿಂದ ಅಭ್ಯಾಸದಲ್ಲಿ ನಿರತರಾಗಿರುವ ಉಭಯ ತಂಡಗಳ ಆಟಗಾರರು ಇಂದಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ.

ಇನ್ನು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್‌ನಲ್ಲಿ ಬೃಹತ್ ದಾಖಲೆ ನಿರ್ಮಿಸಲಿದ್ದಾರೆ.
ಭಾರತ ಕ್ರಿಕೆಟ್‌ನ ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಲು ಕೇವಲ 163 ರನ್‌ಗಳ ಅಗತ್ಯವಿದೆ. ಸದ್ಯ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಈ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ.

ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಈವರೆಗೆ 244 ಏಕದಿನ ಪಂದ್ಯಗಳಲ್ಲಿ 48.69ರ ಸರಾಸರಿಯಲ್ಲಿ 89.97ರ ಸ್ಟ್ರೈಕ್ ರೇಟ್‌ನೊಂದಿಗೆ 9837 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕಗಳು ಮತ್ತು 48 ಅರ್ಧಶತಕಗಳನ್ನು ಒಳಗೊಂಡಿವೆ.
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಎರಡನೇ ವೇಗದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ 205 ಇನ್ನಿಂಗ್ಸ್‌ಗಳಲ್ಲಿ ಅತಿ ವೇಗವಾಗಿ 10,000 ರನ್ ಹೆಗ್ಗುರುತನ್ನು ತಲುಪಿದ ದಾಖಲೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಇನ್ನು ರೋಹಿತ್ ಶರ್ಮಾ ಇದುವರೆಗೆ 237 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ
ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲನ್ನು ತಲುಪಲು 259 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸುಲಭವಾಗಿ ಮೀರಿಸಬಹುದು.
10,000 ರನ್‌ಗಳನ್ನು ಪೂರೈಸಲು ಕಡಿಮೆ ಇನ್ನಿಂಗ್ಸ್ ತೆಗೆದುಕೊಂಡವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರ ಸೌರವ್ ಗಂಗೂಲಿ (263 ಇನ್ನಿಂಗ್ಸ್), ರಿಕಿ ಪಾಂಟಿಂಗ್ (266 ಇನ್ನಿಂಗ್ಸ್), ಜಾಕ್ವಿಸ್ ಕಾಲಿಸ್ (272 ಇನ್ನಿಂಗ್ಸ್), ಎಂಎಸ್ ಧೋನಿ (273 ಇನ್ನಿಂಗ್ಸ್) ಮತ್ತು ಬ್ರಿಯಾನ್ ಲಾರಾ (278 ಇನ್ನಿಂಗ್ಸ್) ಇದ್ದಾರೆ.
ಇನ್ನು ಏಷ್ಯಾ ಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬೃಹತ್ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ ಒಂದು ವೇಳೆ 102 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.
ಭಾರತ ಕ್ರಿಕೆಟ್‌ನ ತಂಡದ ಸಾರ್ವಕಾಲಿಕ ಶ್ರೇಷ್ಠ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 13000 ರನ್ ಪೂರೈಸಲು ಕೇವಲ 102 ರನ್‌ಗಳ ದೂರದಲ್ಲಿದ್ದಾರೆ.
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಚೇಸ್ ಮಾಸ್ಟರ್, ರನ್ ಮಷಿನ್ ಎಂದೇ ಖ್ಯಾತಿಯಾಗಿರುವ 34 ವರ್ಷದ ವಿರಾಟ್ ಕೊಹ್ಲಿ ಆಡಿರುವ 275 ಪಂದ್ಯಗಳಲ್ಲಿ 57.32ರ ಸರಾಸರಿ ಮತ್ತು 93.62ರ ಸ್ಟ್ರೈಕ್ ರೇಟ್‌ನಲ್ಲಿ 46 ಶತಕ ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಕಲೆಹಾಕಿದ್ದಾರೆ.
ವಿರಾಟ್ ಕೊಹ್ಲಿ ಇದುವರೆಗೆ 265 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿದ್ದು, ಈ ಸ್ವರೂಪದಲ್ಲಿ 13000 ರನ್‌ಗಳ ಹೆಗ್ಗುರುತನ್ನು ತಲುಪಿದ ವಿಶ್ವದ ಅತಿ ವೇಗದ ಬ್ಯಾಟ್ಸ್‌ಮನ್ ಆಗಲಿದ್ದಾರೆ.