
ಎರಡು ಏಕದಿನ ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿರುವ ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇದೀಗ ಮತ್ತೊಂದು ಪಂದ್ಯಕ್ಕೆ ಸಿದ್ಧವಾಗಿದೆ. ಮೊದಲೆರಡು ಪಂದ್ಯಗಳನ್ನು ಎರಡೂ ತಂಡಗಳು ಕೂಡ ತಲಾ ಒಂದು ಪಂದ್ಯ ಗೆದ್ದು ಸರಣಿಯನ್ನು ಸಮಬಲ ಮಾಡಿಕೊಂಡಿದ್ದು ಮೂರನೇ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಆದರೆ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆಗೆ ಸಜ್ಜಾಗಿ ನಿಂತಿದ್ದಾರೆ. ಇದು 22ವರ್ಷದ ಹಿಂದೆ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಮಾಡಿದ ದಾಖಲೆಯಾಗಿದ್ದು ಈ ದಾಖಲೆಯನ್ನು ರೋಹಿತ್ ಶರ್ಮಾ ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಕೇವಲ 9 ರನ್ ಗಳಿಸಿದರೆ ರೋಹಿತ್ ಈ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.
ಸನತ್ ಜಯಸೂರ್ಯ ಎಲ್ಲಾ ಫಾರ್ಮೆಟ್‌ಗಳಲ್ಲೂ ಕ್ಯಾಲೆಂಡರ್‌ವರ್ಷದಲ್ಲಿ ಅತಿಹೆಚ್ಚು ರನ್‌ಗಳಿಸಿದ ಆರಂಭಿಕ ಆಟಗಾರ ಆಗಿದ್ದಾರೆ. ಈ ದಾಖಲೆಯನ್ನು ಮುರಿಯುವ ಅಪೂರ್ವ ಅವಕಾಶ ರೋಹಿತ್ ಶರ್ಮಾ ಮುಂದಿದೆ. ಆದರೆ ರೋಹಿತ್ ಶರ್ಮಾ ಈ ವರ್ಷ ಆಡಲು ಉಳಿದಿರುವ ಪಂದ್ಯ ಇದೊಂದೇ ಆಗಿದೆ.
ರೋಹಿತ್ ಶರ್ಮಾ ಈ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೂರು ಪಾರ್ಮ್ಯಾಟ್‌ಗಳಲ್ಲಿ 2379 ರನ್ ದಾಖಲಿಸಿದ್ದಾರೆ. 1997ರಲ್ಲಿ ಸನತ್ ಜಯಸೂರ್ಯ 2387 ರನ್ ದಾಖಲಿಸಿದ್ದರು. ಈ ಮೊತ್ತ ಹಿಂದಿಕ್ಕಲು ಕೇವಲ 9 ರನ್ ಹಿಂದೆಯಿದ್ದಾರೆ. ವಿಶಾಖಪಟ್ಟಣಂ ನಡೆದ ಪಂದ್ಯದಲ್ಲಿ ರೋಹಿತ್ ಬರೊಬ್ಬರಿ 159 ರನ್ ಚಚ್ಚಿದ್ದರು.