ಜುಲೈ 12ರಿಂದ ಪ್ರಾರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಸ್ವರೂಪದ ಸರಣಿಗಳಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಭಾರತ ಕ್ರಿಕೆಟ್ ತಂಡ ಮುಂದಿನ ತಿಂಗಳು ಕೆರಿಬಿಯನ್ ಪ್ರವಾಸ ಕೈಗೊಳ್ಳಲಿದ್ದು, ಎರಡು ಟೆಸ್ಟ್ ಪಂದ್ಯಗಳನ್ನೊಳಗೊಂಡ ಮೂರು ಏಕದಿನ ಪಂದ್ಯಗಳು, ಐದು ಟಿ20 ಪಂದ್ಯಗಳು ಸೇರಿ ಬಹು ಮಾದರಿಯ ಸರಣಿಗಳನ್ನು ಆಡಲಿದೆ.

ಈ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿ ಮೊದಲ ಸರಣಿಯಾಗಿರಲಿದೆ. ಅಲ್ಲದೆ, ಎರಡನೇ ಪಂದ್ಯವು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 100ನೇ ಐತಿಹಾಸಿಕ ಟೆಸ್ಟ್ ಪಂದ್ಯವಾಗಿರಲಿದೆ.
ಭಾನುವಾರ, ಜೂನ್ 11ರಂದು ಲಂಡನ್‌ನ ಓವಲ್‌ನಲ್ಲಿ ಮುಕ್ತಾಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ ಹೀನಾಯ ಸೋಲು ಕಂಡಿತು.
209 ರನ್‌ಗಳ ತೀರಾ ಅವಮಾನಕರ ಸೋಲು ಅನುಭವಿಸಿದ ರೋಹಿತ್ ಶರ್ಮಾ ಬಳಗ ಮತ್ತು ಭಾರತ ತಂಡದ ಮ್ಯಾನೇಜ್‌ಮೆಂಟ್ ಫೈನಲ್ ಹಣಾಹಣಿಯ ಪ್ರದರ್ಶನಕ್ಕಾಗಿ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಂದ ಸಾಕಷ್ಟು ಟೀಕೆ ಎದುರಿಸಬೇಕಾಯಿತು.
ಗಮನಾರ್ಹ ಅಂಶವಾಗಿ, ಎಲ್ಲಾ ಸ್ವರೂಪದ ಆಟಗಳಲ್ಲಿ ನಾಯಕನ ಜವಾಬ್ದಾರಿ ನಿಭಾಯಿಸಿದ ನಂತರ ರೋಹಿತ್ ಶರ್ಮಾ ತೀವ್ರವಾದ ಕೆಲಸದ ಹೊರೆ ಎದುರಿಸಿದ್ದಾರೆ. ಈ ಮಧ್ಯೆ ಐಪಿಎಲ್ 2023ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದರು.
ಇತ್ತೀಚಿನ ವರದಿಗಳ ಪ್ರಕಾರ, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೋಹಿತ್ ಶರ್ಮಾಗೆ ಕೆಲವು ಪಂದ್ಯಗಳಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಟೆಸ್ಟ್ ಅಥವಾ ಎಂಟು ಪಂದ್ಯಗಳ ವೈಟ್-ಬಾಲ್ ಸರಣಿಗೆ ವಿಶ್ರಾಂತಿ ನೀಡಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
"ಐಪಿಎಲ್ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಸ್ವಲ್ಪ ಬಳಲಿದಂತೆ ಕಾಣುತ್ತಿದ್ದರು. ವೆಸ್ಟ್ ಇಂಡೀಸ್ ಪ್ರವಾಸದ ಕೆಲವು ಪಂದ್ಯಗಳಿಗೆ ಅವರು ವಿಶ್ರಾಂತಿ ಪಡೆಯಬೇಕೆಂದು ಆಯ್ಕೆಗಾರರು ಬಯಸುತ್ತಾರೆ".
"ರೋಹಿತ್ ಶರ್ಮಾ ಟೆಸ್ಟ್ ಸರಣಿ ಅಥವಾ ಎಂಟು ಪಂದ್ಯಗಳ ವೈಟ್-ಬಾಲ್ ಸರಣಿಯನ್ನು (ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20) ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಆಯ್ಕೆಗಾರರು ರೋಹಿತ್ ಶರ್ಮಾ ಜೊತೆ ಮಾತನಾಡಿ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ," ಎಂದು ಮೂಲಗಳು ತಿಳಿಸಿವೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ 15 ಮತ್ತು 43 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಐಪಿಎಲ್‌ನಲ್ಲೂ ರೋಹಿತ್ ಶರ್ಮಾ 16 ಪಂದ್ಯಗಳಲ್ಲಿ 20.75ರ ಸರಾಸರಿಯಂತೆ 332 ರನ್ ಗಳಿಸುವ ಮೂಲಕ ನೀರಸ ಪ್ರದರ್ಶನ ನೀಡಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ ಬಹು ಮಾದರಿಯ ಸರಣಿಗಾಗಿ ತಂಡಗಳನ್ನು ಆಯ್ಕೆ ಸಮಿತಿ ಇನ್ನೂ ಪ್ರಕಟಿಸಿಲ್ಲ. ಆದರೆ, ಮುಂಬರುವ ವಾರಗಳಲ್ಲಿ ಈ ಸರಣಿಗಾಗಿ ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸುವ ಅಧಿಕೃತ ತಂಡಗಳನ್ನು ಆಯ್ಕೆಗಾರರು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.