ಒಂದು ತಿಂಗಳ ವಿರಾಮದ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿದ್ದು ಮೊದಲ ಪಂದ್ಯ ಡೊಮೆನಿಕಾದಲ್ಲಿ ಬುಧವಾರದಿಂದ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದು ವಿಂಡೀಸ್ ಬ್ಯಾಟರ್‌ಗಳಿಗೆ ದೊಡ್ಡ ಆಘಾತ ನೀಡಿದ್ದಾರೆ. ಈ ಮೂಲಕ ದಿನದ ಸ್ಟಾರ್ ಆಟಗಾರ ಎನಿಸಿಕೊಂಡಿದ್ದಾರೆ ಅಶ್ವಿನ್.
ಆರ್ ಅಶ್ವಿನ್ ಅವರ ಈ ಅದ್ಭುತ ಬೌಲಿಂಗ್‌ನ ಕಾರಣದಿಂದಾಗಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 150 ರನ್‌ಗಳಿಗೆ ಅಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ನಂತರ ಬ್ಯಾಟಿಂಗ್ ಆರಂಭಿಸಿರುವ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದ್ದಾರೆ. ರೋಹಿತ್ ಶರ್ಮಾ 30 ರನ್ ಹಾಗೂ ಯಶಸ್ವಿ ಜೈಸ್ವಾಲ್ 40 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ.

ರೋಹಿತ್ ಶರ್ಮಾ ದೊಡ್ಡ ಇನ್ನಿಂಗ್ಸ್‌ವೊಂದನ್ನು ಕಟ್ಟುವ ಅಗತ್ಯವಿದ್ದು ತಮ್ಮ ಬ್ಯಾಟಿಂಗ್ ಬಗ್ಗೆ ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಈ ಮೂಲಕ ಉತ್ತರ ನೀಡುವ ಅಗತ್ಯವಿದ್ದು ಶತಕಗಳಿಸುವ ಅತ್ಯುತ್ಯಮ ಅವಕಾಶ ಹೊಂದಿದ್ದಾರೆ. ಆದರೆ ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ರೋಹಿತ್ ಶರ್ಮಾ ಕಿವೀಸ್ ದಾಂಡಿಗ ವಿಲಿಯಮ್ಸನ್‌ಗಿಂತ 27 ರನ್‌ಗಳಷ್ಟು ಹಿಂದೆ ಇದ್ದರು. ಆದರೆ ಮೊದಲ ದಿನದಾಟದ ಅಂತ್ಯದ ಬಳಿಕ ರೋಹಿತ್ ಶರ್ಮಾ 17145 ರನ್‌ಗಳನ್ನು ಹೊಂದಿದ್ದಾರೆ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ನ್ಯೂಜಿಲೆಂಡ್ ನಾಯಕ ಇದುವರೆಗೆ ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 17142 ರನ್ ಗಳಿಸಿದ್ದಾರೆ. ಹೀಗಾಗಿ ಸಕ್ರಿಯ ಕ್ರಿಕೆಟಿಗರ ಪೈಕಿ ರೋಹಿತ್ ಶರ್ಮಾ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಅತಿ ಹೆಚ್ಚು ರನ್‌ಗಳಿಸಿರುವ ಸಕ್ರಿಯ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು 25,385 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಜೋ ರೂಟ್ 18000 ಕ್ಕೂ ಹೆಚ್ಚು ರನ್ ಗಳಿಸಿದ್ದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಕ್ರಿಸ್ ಗೇಲ್ ಅವರು ದೀರ್ಘಕಾಲದಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆಡಿಲ್ಲದಿದ್ದರೂ ನಿವೃತ್ತಿ ಘೋಷಿಸಿಲ್ಲವಾಗಿರುವ ಕಾರಣ ಅವರನ್ನು ಈ ಪಟ್ಟಿಯಲ್ಲಿ ಸಕ್ರಿಯ ಆಟಗಾರ ಎಂದು ಪರಿಗಣಿಸಲಾಗಿದೆ. ಅವರ ಹೆಸರಿಗೆ 19593 ಅಂತರರಾಷ್ಟ್ರೀಯ ರನ್‌ಗಳಿದ್ದು ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ 17267 ರನ್ ಗಳಿಸಿದ್ದು ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ, ವಿಲಿಯಮ್ಸನ್ ಅವರನ್ನು ಹಿಂದಿಕ್ಕಿ ಈಗ 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಾರ್ನರ್ ಅವರನ್ನು ಕೂಡ ಹಿಂದಿಕ್ಕುವ ಅವಕಾಶ ರೋಹಿತ್ ಶರ್ಮಾಗೆ ಇದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಸಕ್ರಿಯ ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ 25385
ಕ್ರಿಸ್ ಗೇಲ್ 19593
ಜೋ ರೂಟ್ 18336
ಡೇವಿಡ್ ವಾರ್ನರ್ 17267
ರೋಹಿತ್ ಶರ್ಮಾ 17145*