ಹ್ಯಾಮಿಲ್ಟನ್, ಮಾ.10: ವಿಶ್ವಕಪ್ 2015 ಕಿವೀಸ್ ನೆಲದಲ್ಲಿ ಮೊದಲ ಪಂದ್ಯವಾಡಿದ ಭಾರತ ತಂಡ ಐರ್ಲೆಂಡ್ ವಿರುದ್ಧ ಭರ್ಜರಿ 8 ವಿಕೆಟ್ ಗಳ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಎಂಎಸ್ ಧೋನಿ, ಟೀಂ ಇಂಡಿಯಾ, ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ದಾಖಲೆಗಳನ್ನು ಮುರಿದಿದ್ದಾರೆ.
ಎಂಎಸ್ ಧೋನಿ ಅವರು ಒಟ್ಟಾರೆ ವಿಶ್ವಕಪ್ ನಲ್ಲಿ 12 ಪಂದ್ಯ ಹಾಗೂ ಪ್ರಸಕ್ತ ಟೂರ್ನಿಯಲ್ಲಿ ಸತತ 5 ಪಂದ್ಯ ಗೆಲ್ಲಿಸುವ ಮೂಲಕ ಟೀಂ ಇಂಡಿಯಾ ಹಾಗೂ ವೈಯಕ್ತಿಕ ನಾಯಕನಾಗಿ ಹೊಸ ದಾಖಲೆ ಬರೆದರು. [ಕಪಿಲ್ ರೆಕಾರ್ಡ್ ಮುರಿದ ಕ್ಯಾಪ್ಟನ್ ಎಂಎಸ್ ಧೋನಿ]
ಐರ್ಲೆಂಡ್ ನೀಡಿದ್ದ 260 ರನ್ ಚೇಸ್ ಮಾಡಿದ ಟೀಂ ಇಂಡಿಯಾದ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಅವರು ಸಚಿನ್ ತೆಂಡೂಲ್ಕರ್ ಹಾಗೂ ಅಜಯ್ ಜಡೇಜ ನಿರ್ಮಿಸಿದ್ದ ಜೊತೆಯಾಟದ ದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲಿ ಇದುವರೆವಿಗೂ ಸಚಿನ್- ಜಡೇಜ ಜೊತೆಯಾಟ ದಾಖಲೆಯಾಗಿತ್ತು. 1996ರಲ್ಲಿ ಕೀನ್ಯಾ ವಿರುದ್ಧ ಸಚಿನ್ ಹಾಗೂ ಜಡೇಜ ಜೋಡಿ 163ರನ್ ಕಲೆ ಹಾಕಿತ್ತು. ಸಚಿನ್ ಅವರು ಅಮೋಘ ಶತಕ ಸಿಡಿಸಿದರೆ, ಜಡೇಜ 53ರನ್ ಕೊಡುಗೆ ನೀಡಿದ್ದರು.
ಈ ದಾಖಲೆಯನ್ನು ರೋಹಿತ್ ಹಾಗೂ ಶಿಖರ್ ಧವನ್ ಮುರಿದಿದ್ದು ಐರ್ಲೆಂಡ್ ವಿರುದ್ಧ ಮೊದಲ ವಿಕೆಟ್ ಗೆ 174ರನ್ ಕಲೆ ಹಾಕಿ ಹೊಸ ದಾಖಲೆ ಬರೆದಿದ್ದಾರೆ. ರೋಹಿತ್ ಅವರು 64 ರನ್ ಹೊಡೆದರೆ, ಶಿಖರ್ ಧವನ್ ಶತಕ ಸಿಡಿಸಿದರು.[ಐರ್ಲೆಂಡ್ ವಿರುದ್ಧ ಭಾರತಕ್ಕ್ಕೆ ದಾಖಲೆ ಜಯ]
ರೋಹಿತ್ ಶರ್ಮ ಅವರು 132ನೇ ಪಂದ್ಯದಲ್ಲಿ 4000 ರನ್ ಪೂರೈಸಿದರು. ಶಿಖರ್ ಧವನ್ ವಿಶ್ವಕಪ್ 2015ರಲ್ಲಿ ಎರಡನೇ ಹಾಗೂ ಒಟ್ಟಾರೆ ವೈಯಕ್ತಿಕ 8ನೇ ಶತಕ ದಾಖಲಿಸಿದರು.

ಬಲಗೈ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಹಾಗೂ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಕಾಂಬಿನೇಷನ್ 23.2 ಓವರ್ ಗಳಲ್ಲಿ 174ರನ್ ಗಳಿಸಿದ್ದು ಟೀಂ ಇಂಡಿಯಾ ಸೆಡಾನ್ ಪಾರ್ಕಿನಲ್ಲಿ ಐರ್ಲೆಂಡ್ ವಿರುದ್ಧ ದಾಖಲೆ ಜಯ ದಾಖಲಿಸಲು ನೆರವಾಯಿತು. [ವಿಶ್ವಕಪ್ 2015: ಈ ಯುವ ಸ್ಟಾರ್ ಗಳ ಮೇಲೆ ಕಣ್ಣಿರಿಸಿ]
ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅವರು ಐರ್ಲೆಂಡ್ ವಿರುದ್ಧ ಮೊದಲ ವಿಕೆಟ್ ಗೆ ಕಲೆ ಹಾಕಿರುವ 174 ರನ್ ಜೊತೆಯಾಟ ವಿಶ್ವಕಪ್ 2015 ಟೂರ್ನಿಯ ಶ್ರೇಷ್ಠ ಜೊತೆಯಾಟ ಎನಿಸಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮೋಯಿನ್ ಅಲಿ ಹಾಗೂ ಇಯಾನ್ ಬೆಲ್ ಸ್ಕಾಟ್ಲೆಂಡ್ ವಿರುದ್ಧ 172ರನ್ ಜೊತೆಯಾಟ ಪ್ರದರ್ಶಿಸಿದ್ದರು.
ಒನ್ ಇಂಡಿಯಾ ಸುದ್ದಿ