ಕೋಲ್ಕತ್ತಾ: ಟಿ20 ವಿಶ್ವಕಪ್ ಆರಂಭವಾಗಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಸ್ಕಾಟ್ಲೆಂಡ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಚಾಂಪಿಯನ್ ಆಟಗಾರ ರೊಮಾರಿಯೊ ಶೆಫರ್ಡ್ ಅಬ್ಬರಿಸಿದರು. ಅಲ್ಲದೆ ಮೊದಲ ದಿನವೇ ಇವರು ಇತಿಹಾಸದ ಪುಟ ಸೇರಿದರು. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಹ್ಯಾಟ್ರಿಕ್ ಪಡೆದು ದಾಖಲೆ ಬರೆದಿದ್ದಾರೆ. ಇವರು ಅಮೋಘ ಆಟದ ನೆರವಿನಿಂದ ವೆಸ್ಟ್ ಇಂಡೀಸ್ 35 ರನ್‌ಗಳಿಂದ ಸ್ಕಾಟ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಬ್ರಾಂಡನ್ ಕಿಂಗ್ ಹಾಗೂ ನಾಯಕ ಶಾಯ್ ಹೋಪ್ ಜೋಡಿ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 54 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಶಾಯ್ ಹೋಪ್ 2 ಬೌಂಡರಿ ನೆರವಿನಿಂದ 19 ರನ್ ಬಾರಿಸಿ ಔಟ್ ಆದರು. ಆರಂಭಿಕ ಕಿಂಗ್ ಸಹ 35 ರನ್ ಬಾರಿಸಿದರು.

58 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಶಿಮ್ರೋನ್ ಹೆಟ್ಮೆಯರ್ ಹಾಗೂ ರೋವ್‌ಮನ್ ಪೊವೆಲ್ ಜೋಡಿ ಆಕರ್ಷಕ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ 37 ಎಸೆತಗಳಲ್ಲಿ 81 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಈ ಹಂತದಲ್ಲಿ ರೋವ್‌ಮನ್ ಪೊವೆಲ್ 1 ಬೌಂಡರಿ, 2 ಸಿಕ್ಸರ್ ನೆರವಿನಿಂದ 24 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟರ್ ಶಿಮ್ರೊನ್ ಹೆಟ್ಮೆಯರ್ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ 64 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಶೆರ್ಫೇನ್ ರುದರ್ಫೋರ್ಡ್ 26 ರನ್‌ಗಳಿಗೆ ಆಟ ಮುಗಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 182 ರನ್ ಕಲೆ ಹಾಕಿತು.

ಗುರಿಯನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ವಿಂಡೀಸ್ ಬೌಲರ್‌ಗಳು ಸ್ಕಾಟ್ಲೆಂಡ್ ತಂಡಕ್ಕೆ ಪವರ್ ಪ್ಲೇನಲ್ಲಿ ರನ್ ಬಾರಿಸಲು ಬಿಡಲಿಲ್ಲ. ಈ ಹಂತದಲ್ಲಿ ಸ್ಕಾಟ್ಲೆಂಡ್ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಾಲ್ಕನೇ ವಿಕೆಟ್‌ಗೆ ರಿಚೀ ಬೆರಿಂಗ್ಟನ್ ಹಾಗೂ ಟಾಮ್ ಬ್ರೂಸ್ ಜೋಡಿ ವಿಂಡೀಸ್ ಬೌಲರ್‌ಗಳನ್ನು ಕಾಡಿತು. ಈ ಜೋಡಿ 47 ಎಸೆತಗಳಲ್ಲಿ 78 ರನ್ ಸೇರಿಸಿತು. ನಾಯಕ ರಿಚೀ ಬೆರಿಂಗ್ಟನ್ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 42 ರನ್ ಬಾರಿಸಿದರೆ, ಟಾಮ್ ಬ್ರೂಸ್ 35 ರನ್ ಬಾರಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಸ್ಕಾಟ್ಲೆಂಡ್ 18.5 ಓವರ್‌ಗಳಲ್ಲಿ 147 ರನ್ ಸೇರಿಸಿ ಸೋಲು ಕಂಡಿತು.
ವೆಸ್ಟ್ ಇಂಡೀಸ್ ತಂಡದ ರೊಮಾರಿಯೊ ಶೆಫರ್ಡ್ ಅಬ್ಬರಿಸಿದರು. ಇವರು 3 ಓವರ್ ಬೌಲ್ ಮಾಡಿ 20 ರನ್ ನೀಡಿ 5 ವಿಕೆಟ್ ಪಡೆದರು. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಸಹ ಸೇರಿದೆ. ಉಳಿದಂತೆ ಅನುಭವಿ ಜೇಸನ್ ಹೋಲ್ಡರ್ 3 ವಿಕೆಟ್ ಉರುಳಿಸಿದರು.
ರೊಮಾರಿಯೊ ಶೆಫರ್ಡ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾರೆ. ಇವರು 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅಬ್ಬರ ನಡೆಸಿದ್ದರು. ಆರ್‌ಸಿಬಿ ಪರ ಕಳೆದ ಆವೃತ್ತಿಯಲ್ಲಿ ಇವರು 8 ಪಂದ್ಯಗಳಲ್ಲಿ 73 ರನ್ ಸಿಡಿಸಿದ್ದಾರೆ. ಅಲ್ಲದೆ 6 ವಿಕೆಟ್ ಸಹ ಪಡೆದಿದ್ದಾರೆ.