RR vs GT IPL 2024: ರಾಜಸ್ಥಾನ್ ಕೋಟೆ ಭೇದಿಸಿದ ಗುಜರಾತ್ ಟೈಟನ್ಸ್; ಮೊದಲ ಸೋಲು ಕಂಡ ರಾಯಲ್ಸ್
ಬುಧವಾರ, ಏಪ್ರಿಲ್ 10ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 24ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ತಂಡವು ಕೊನೆಯ ಎಸೆತದ ರೋಚಕ ಗೆಲುವು ಸಾಧಿಸಿತು.
ಈ ಮೂಲಕ ಐಪಿಎಲ್ 2024ರಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಸೋಲು ಅನುಭವಿಸಿತು. ಇನ್ನು ರಾಜಸ್ಥಾನ್ ಕೋಟೆ ಭೇದಿಸಿದ ಗುಜರಾತ್ ಟೈಟನ್ಸ್ ತಂಡ ಪಂದ್ಯಾವಳಿಯಲ್ಲಿ ಮೂರನೇ ಗೆಲುವು ಸಾಧಿಸಿತು.

ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 196 ರನ್‌ಗಳನ್ನು ಕಲೆಹಾಕಿತ್ತು.
197 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ನಾಯಕ ಶುಭ್ಮನ್ ಗಿಲ್ ಅವರ ಅಮೋಘ ಅರ್ಧಶತಕ ಮತ್ತು ರಶೀದ್ ಖಾನ್ ಅವರ ಪಂದ್ಯ-ವಿಜೇತ ಬೌಂಡರಿ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿ 3 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ನಾಟಕೀಯ ತಿರುವಿನಲ್ಲಿ ಕೊನೆಯ ಎಸೆತದವರೆಗೂ ತೆಗೆದುಕೊಂಡ ಹೋದ ಈ ಪಂದ್ಯವು ಕೊನೆಯ ಎಸೆತದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ರಶೀದ್ ಖಾನ್ ಬೌಂಡರಿ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಅಂತಿಮ ಎರಡು ಎಸೆತಗಳಲ್ಲಿ 4 ರನ್‌ಗಳು ಬೇಕಾಗಿದ್ದಾಗ ರಾಹುಲ್ ತೆವಾಟಿಯಾ ಮೂರನೇ ರನ್ ಓಡುವಾಗ ರನೌಟ್ ಆದರು.
ಆಗ ಕೊನೆಯ ಎಸೆತದಲ್ಲಿ 2 ರನ್‌ಗಳು ಬೇಕಾಗಿದ್ದವು. ಅವೇಶ್ ಖಾನ್ ಅವರ ಕೊನೆಯ ಓವರ್‌ನ ಕೊನೆಯ ಎಸೆತವನ್ನು ರಶೀದ್ ಖಾನ್ ಬೌಂಡರಿ ಗಳಿಸಿ ಗೆಲುವು ಖಚಿತಪಡಿಸಿದರು.

ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 64 ರನ್‌ಗಳ ಜೊತೆಯಾಟ ನಿರ್ಮಿಸಿದರು.
ಸಾಯಿ ಸುದರ್ಶನ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 35 ರನ್ ಗಳಿಸಿ ಔಟಾದರೆ, ನಂತರ ಬಂದ ಮ್ಯಾಥ್ಯೂ ವೇಡ್ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕನ್ನಡಿಗ ಅಭಿನವ್ ಮನೋಹರ್ 1 ರನ್ ಮಾತ್ರ ಗಳಿಸಿ ಬೌಲ್ಡ್ ಆದರು.
ಇನ್ನು ನಾಯಕ ಶುಭ್ಮನ್ ಗಿಲ್ 44 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ 72 ರನ್ ಬಾರಿಸಿ ಔಟಾದರು. ಇನ್ನು ವಿಜಯ್ ಶಂಕರ್ 16 ರನ್, ರಾಹುಲ್ ತೆವಾಟಿಯಾ 11 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 22 ರನ್ ಗಳಿಸಿದರೆ, ಶಾರೂಖ್ ಖಾನ್ 14 ರನ್ ಮತ್ತು ರಶೀದ್ ಖಾನ್ 11 ಎಸೆತಗಳಲ್ಲಿ 4 ಬೌಂಡರಿ ಸಮೇತ ಅಜೇಯ 24 ರನ್ ಬಾರಿಸಿ ಗೆಲುವಿನ ರೂವಾರಿಯಾದರು.
ಬೌಲಿಂಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕುಲದೀಪ್ ಸೇನ್ 4 ಓವರ್‌ಗಳಲ್ಲಿ 41 ರನ್ ನೀಡಿ 3 ವಿಕೆಟ್ ಪಡೆದರೆ, ಯುಜ್ವೇಂದ್ರ ಚಹಾಲ್ 4 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಅವೇಶ್ ಖಾನ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಉತ್ತಮ ಆರಂಭ ನೀಡಲು ವಿಫಲರಾದರು. ಈ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 32 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಯಶಸ್ವಿ ಜೈಸ್ವಾಲ್ 19 ಎಸೆತಗಳಲ್ಲಿ 5 ಬೌಂಡರಿ ಸಮೇತ 24 ರನ್ ಗಳಿಸಿ ಔಟಾದರು. ಜೋಸ್ ಬಟ್ಲರ್ ಕೂಡ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಆ ನಂತರ ಜೊತೆಗೂಡಿದ ಸಂಜು ಸ್ಯಾಮ್ಸನ್ ಮತ್ತು ರಿಯಾನ್ ಪರಾಗ್ ಆಕ್ರಮಣಕಾರಿ ಆಟದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ಜೋಡಿ ಮೂರನೇ ವಿಕೆಟ್‌ಗೆ 130 ರನ್‌ಗಳ ಜೊತೆಯಾಟ ನಿರ್ಮಿಸಿದರು.
ರಿಯಾನ್ ಪರಾಗ್ 48 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಮೂಲಕ 76 ರನ್ ಬಾರಿಸಿ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ದೊಡ್ಡ ಶಾಟ್‌ಗೆ ಪ್ರಯತ್ನಿಸಿ ಕ್ಯಾಚ್ ನೀಡಿದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ 5 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 13 ರನ್ ಗಳಿಸಿದರು.
ನಾಯಕ ಸಂಜು ಸ್ಯಾಮ್ಸನ್ ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದರು. 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಮೇತ ಅಜೇಯ 68 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಉಮೇಶ್ ಯಾದವ್ 4 ಓವರ್‌ಗಳಲ್ಲಿ 47 ರನ್ ನೀಡಿ 1 ವಿಕೆಟ್ ಪಡೆದರೆ, ರಶೀದ್ ಖಾನ್ 4 ಓವರ್‌ಗಳಲ್ಲಿ 18 ರನ್ ನೀಡಿ 1 ವಿಕೆಟ್ ಮತ್ತು ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 51 ರನ್ ನೀಡಿ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications