ಅಹಮದಾಬಾದ್: ಕೊನೆಯ ಎರಡು ಓವರ್‌ಗಳಲ್ಲಿ ಕಮಾಲ್ ಬೌಲಿಂಗ್ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ 6 ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಆರ್‌ಆರ್ ರನ್ ಉಳಿಸಿಕೊಳ್ಳುವಲ್ಲಿ ಸಫಲವಾಯಿತು. ಅಲ್ಲದೆ ಲೀಗ್‌ನಲ್ಲಿ ಎರಡನೇ ಜಯ ದಾಖಲಿಸಿದೆ.
ಕೊನೆಯ ಎರಡು ಓವರ್‌ಗಳಲ್ಲಿ ರಾಜಸ್ಥಾನ್ ಭರ್ಜರಿ ಕಂ ಬ್ಯಾಕ್ ಮಾಡಿತು. 19ನೇ ಓವರ್ ಮಾಡಿದ ಜೋಫ್ರಾ ಆರ್ಚರ್ ಬೌಲ್ ಮಾಡಲು ಮುಂದಾದರು. 12 ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್‌ಗೆ 15 ರನ್ ಅವಶ್ಯಕತೆ ಇತ್ತು. ಜೋಫ್ರಾ ಕೇವಲ 4 ರನ್ ನೀಡಿ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಇನ್ನು ಕೊನೆಯ ಓವರ್‌ನಲ್ಲಿ ತುಷಾರ್ ದೇಶಪಾಂಡೆ 11 ರನ್ ನೀಡದಂತೆ ತಡೆಯುವಲ್ಲಿ ಸಫಲರಾದರು. ಪರಿಣಾಮ ರಾಜಸ್ಥಾನ್ ಭರ್ಜರಿ ಜಯ ಸಾಧಿಸಿತು.

ಸವಾಲಿನ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕ ಕುಮಾರ್ ಕುಶಾಗ್ರ (18) ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುವಲ್ಲಿ ವಿಫಲರಾದರು. ತಂಡದ ಮೊತ್ತ 78 ಆಗಿದ್ದಾಗ ಕುಮಾರ್ ರಿಯಾನ್ ಪಾರಗ್ ಅವರಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. 44 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿ ರವಿ ಬಿಷ್ಣೋಯಿಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಜೋಸ್ ಬಟ್ಲರ್ 14 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 26 ರನ್ ಸಿಡಿಸಿ ಬರ್ಗರ್ ತೋಡಿದ ಖೆಡ್ಡಾಗೆ ಬಲಿಯಾದರು. ರಶೀದ್ ಖಾನ್ (24) ಹಾಗೂ ಕಗಿಸೋ ರಬಾಡ (ಅಜೇಯ 23) ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು. ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 204 ರನ್ ಸೇರಿಸಿತು.
ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಅಬ್ಬರಿಸಿತು. ಈ ಜೋಡಿ 6.2 ಓವರ್‌ಗಳಲ್ಲಿ 70 ರನ್ ಸೇರಿಸಿತು. ಈ ಅವಧಿಯಲ್ಲಿ ವೈಭವ್ 31 ರನ್ ಬಾರಿಸಿ ಔಟ್ ಆದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 36 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 55 ರನ್ ಬಾರಿಸಿ ಆಧಾರವಾದರು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿಕೆಟ್ ಕೀಪರ್ ಬ್ಯಾಟರ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 42 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ನೆರವಿನಿಂದ 75 ರನ್ ಬಾರಿಸಿದರು. ಶಿಮ್ರೋನ್ ಹೆಟ್ಮೆಯರ್ 18 ರನ್ ಸಿಡಿಸಿದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 210 ರನ್ ಸೇರಿಸಿತು.