
ಎಸ್‌ಎ 20 ಟೂರ್ನಿಯ ಪಂದ್ಯದಲ್ಲಿ ಆರ್ಸಿಬಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಅಬ್ಬರಿಸಿದ್ದಾರೆ. ಭಾನುವಾರ ನಡೆದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ಧದ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ 46 ಎಸೆತಗಳಲ್ಲಿ 96 ರನ್ ಬಾರಿಸಿ ಮಿಂಚಿದ್ದಾರೆ. ಎಸ್‌ಎ 20 ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಪರವಾಗಿ ಅವರು ಆಡುತ್ತಾರೆ.
ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಅಕ್ಷರಶಃ ಅಬ್ಬರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ವಿಲ್ ಜ್ಯಾಕ್ಸ್ 7 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 92 ರನ್ ಗಳಿಸಿ ಮಿಂಚು ಹರಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿಲ್ ಜ್ಯಾಕ್ಸ್ ಅಬ್ಬರದ ಪರಿಣಾಮ 20 ಓವರ್ ಗಳಲ್ಲಿ 216 ರನ್ ಗಳಿಸಿದರು. ಈ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 179 ರನ್ ಗಳಿಸುವ ಮೂಲ 37 ರನ್‌ಗಳ ಸೋಲೊಪ್ಪಿಕೊಂಡಿತು.
ಮೊದಲನೇ ಪಂದ್ಯದಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದ ವಿಲ್ ಜ್ಯಾಕ್ಸ್ ಎರಡನೇ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು.

2023ರ ಐಪಿಎಲ್‌ನಲ್ಲಿ ಆರ್ಸಿಬಿ ಪರ ಆಡಲಿರುವ ವಿಲ್ ಜ್ಯಾಕ್ಸ್
ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್ 2023ರ ಐಪಿಎಲ್‌ನಲ್ಲಿ ಆರ್ ಸಿಬಿ ಪರವಾಗಿ ಆಡಲಿದ್ದಾರೆ. ಆಲ್‌ರೌಂಡರ್ ಆಗಿರುವ ಅವರನ್ನು 2023ರ ಐಪಿಎಲ್ ಮಿನಿ ಹರಾಜಿನಲ್ಲಿ 3.20 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ವಿಲ್ ಜ್ಯಾಕ್ಸ್ ಟಿ20 ಕ್ರಿಕೆಟ್‌ನಲ್ಲಿ ಅನುಭವಿ ಆಟಗಾರ. 95 ಟಿ20 ಇನ್ನಿಂಗ್ಸ್‌ಗಳಲ್ಲಿ 2532 ರನ್ ಗಳಿಸಿದ್ದಾರೆ. 154.69 ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟ್ ಮಾಡಿದ್ದಾರೆ. ಟಿ20 ಮಾದರಿಯಲ್ಲಿ ಒಂದು ಶತಕ ಮತ್ತು 20 ಅರ್ಧಶತಕ ಗಳಿಸಿದ್ದಾರೆ. ಆಫ್‌ಬ್ರೇಕ್ ಬೌಲರ್ ಆಗಿರುವ ಅವರು 39 ಇನ್ನಿಂಗ್ಸ್‌ಗಳಲ್ಲಿ 23 ವಿಕೆಟ್ ಪಡೆದಿದ್ದಾರೆ.

25 ಎಸೆತಗಳಲ್ಲಿ ಶತಕ
2019ರಲ್ಲಿ ದುಬೈನಲ್ಲಿ ನಡೆದ ಟಿ10 ಪಂದ್ಯವೊಂದರಲ್ಲಿ ವಿಲ್ ಜ್ಯಾಕ್ಸ್ ಒಂದೇ ಓವರ್‌ನಲ್ಲಿ ಆರು ಸಿಕ್ಸ್ ಬಾರಿಸಿದ್ದರು. 25 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದರು. ಇದು ಅಧಿಕೃತ ಪಂದ್ಯವಾಗಿರದ ಕಾರಣ ದಾಖಲೆಯಲ್ಲಿ ಸೇರಲಿಲ್ಲ.
ಇಂತಹ ವಿಲ್ ಜ್ಯಾಕ್ಸ್ ಈಗ ಎಸ್‌ಎ20 ಪಂದ್ಯದಲ್ಲಿ ಅಬ್ಬರಿಸುತ್ತಿರುವುದು ನೋಡಿ ಆರ್ ಸಿಬಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೊಹ್ಲಿ ಕೂಡ ಫಾರ್ಮ್‌ನಲ್ಲಿದ್ದಾರೆ, ಸಿರಾಜ್ ಬೆಂಕಿಯ ಚೆಂಡನ್ನು ಎಸೆಯುತ್ತಿದ್ದಾರೆ. ಆಟಗಾರರು ಈ ಬಾರಿ ಐಪಿಎಲ್‌ನಲ್ಲಿ ಇದೇ ತರ ಆಡುದ್ರೆ ಈ ಸಲ ಕಪ್ ನಮ್ದೇ ಅಂತ ಖುಷಿಪಡ್ತಿದ್ದಾರೆ ಆರ್ ಸಿಬಿ ಫ್ಯಾನ್ಸ್.