ಫಲೀಸಿತು ಭಾರತೀಯ ಅಭಿಮಾನಿಗಳ ಪ್ರಾರ್ಥನೆ; ವಿಂಡೀಸ್ ಮಣಿಸಿದ ದಕ್ಷಿಣ ಆಫ್ರಿಕಾ
ಅಹಮದಾಬಾದ್: ನಾಯಕ ಐಡನ್ ಮಾರ್ಕ್ರಾಮ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಭಾರತ ಸೆಮಿಫೈನಲ್ ಹಂತಕ್ಕೆ ಸುಲಭವಾಗಿ ಲಗ್ಗೆ ಇಡಲು ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ದಕ್ಷಿಣ ಆಫ್ರಿಕಾ ಅಮೋಘ ಪ್ರದರ್ಶನ ನೀಡಿ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭ ಗುರುವಾರ ಸಾಧಾರಣವಾಗಿತ್ತು. ಬ್ರೆಂಡನ್ ಕಿಂಗ್ ಹಾಗೂ ನಾಯಕ ಶಾಯ್ ಹೋಪ್ ತಂಡಕ್ಕೆ 29 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಕಿಂಗ್ 5 ಬೌಂಡರಿ ಸಹಾಯದಿಂದ 21 ರನ್ ಬಾರಿಸಿದರೆ, ಶಾಯ್ ಹೋಪ್ 16 ರನ್ ಸಿಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೆಯರ್ (2), ರೋವ್‌ಮನ್ ಪಾವೆಲ್ (9), ರೋಸ್ಟನ್ ಚೇಸ್ (2) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಶೆರ್ಫೇನ್ ರುದರ್ಫೋರ್ಡ್ 1 ಸಿಕ್ಸರ್ ಸಹಾಯದಿಂದ 12 ರನ್ ಸಿಡಿಸಿ ಕಾರ್ಬಿನ್ ಬಾಷ್ ತೋಡಿದ ಖೆಡ್ಡಾಗೆ ಬಲಿಯಾದರು. ವೆಸ್ಟ್ ಇಂಡೀಸ್ ತಂಡ 83 ರನ್‌ಗಳಿಗೆ 7 ವಿಕೆಟ್‌ಕಳೆದುಕೊಂಡು ಸಂಕಷ್ಟದಲ್ಲಿತ್ತು.
ರೊಮಾರಿಯೊ ಶೆಫರ್ಡ್ ಅರ್ಧಶತಕ
ಈ ಹಂತದಲ್ಲಿ ತಂಡಕ್ಕೆ ಆಧಾರವಾಗಿದ್ದು ಆರ್‌ಸಿಬಿ ತಂಡದ ಪರ ಆಡುವ ರೊಮಾರಿಯೊ ಶೆಫರ್ಡ್ ಹಾಗೂ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿ ತಂಡದ ಮೊತ್ತ ಸ್ಪರ್ಧಾತ್ಮಕ ಕಲೆ ಹಾಕುವಲ್ಲಿ ನೆರವಾದರು. ಈ ಜೋಡಿ 57 ಎಸೆತಗಳಲ್ಲಿ 89 ರನ್ ಸಿಡಿಸಿತು. ಈ ಹಂತದಲ್ಲಿ ಹೋಲ್ಡರ್ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 49 ರನ್ ಸಿಡಿಸಿದರು. ರೊಮಾರಿಯೊ ಶೆಫರ್ಡ್ ತಮ್ಮ ಅನುಭವದ ಲಾಭ ಪಡೆದು ಬ್ಯಾಟ್ ಮಾಡಿ 37 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 52 ರನ್ ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 176 ರನ್ ಸೇರಿಸಿತು.
ದಕ್ಷಿಣ ಆಫ್ರಿಕಾದ ಪರ ಲುಂಗಿ ಎನ್‌ಗಿಡಿ 3, ಕಗಿಸೊ ರಬಾಡ ಹಾಗೂ ಕಾರ್ಬಿನ್ ಬಾಷ್ ತಲಾ 2 ವಿಕೆಟ್ ಕಬಳಿಸಿದರು.

ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾದ ಆರಂಭಿಕ ಐಡನ್ ಮಾರ್ಕ್ರಾಮ್ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ ಅಬ್ಬರದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ವಿಂಡೀಸ್ ಬೌಲರ್‌ಗಳು ವಿಫಲರಾದರು. ಈ ಜೊಡಿ ಮೊದಲ ವಿಕೆಟ್‌ಗೆ 7.6 ಓವರ್‌ಗಳಲ್ಲಿ 95 ರನ್ ಸೇರಿಸಿತು. ಈ ಹಂತದಲ್ಲಿ ಕ್ವಿಂಟನ್ ಡಿಕಾಕ್ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 47 ರನ್ ಬಾರಿಸಿ ರೋಸ್ಟನ್ ಚೇಸ್ ಎಸೆತದಲ್ಲಿ ಹೋಲ್ಡರ್‌ಗೆ ಕ್ಯಾಚ್ ನೀಡಿದರು.
ಮಾರ್ಕ್ರಾಮ್ ಆರ್ಭಟ
ಎರಡನೇ ವಿಕೆಟ್‌ಗೆ ಮಾರ್ಕ್ರಾಮ್ ಹಾಗೂ ರಿಯಾನ್ ರಿಕಲ್ಟನ್ ಜೋಡಿ ಸಹ ಅಮೋಘ ಜೊತೆಯಾಟವನ್ನು ನೀಡಿತು. ಈ ಜೋಡಿ ತಂಡಕ್ಕೆ ಅಗತ್ಯವಿದ್ದ ರನ್‌ಗಳನ್ನು ಕಲೆ ಹಾಕಿ ಆರ್ಭಟಿಸಿತು. ಈ ಜೋಡಿ ಅಜೇಯ 82 ರನ್‌ಗಳನ್ನು ಸೇರಿಸಿ ತಂಡದ ಗೆಲುವಿನಲ್ಲಿ ಮಿಂಚಿತು. ರಿಕಲ್ಟನ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಸಿಡಿಸಿದರು. ಆರಂಭಿಕರಾಗಿ ಕಾಣಿಸಿಕೊಂಡ ನಾಯಕ ಮಾರ್ಕ್ರಾಮ್ ಅಬ್ಬರಿಸಿದರು. ಇವರು 46 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 7 ಬೌಂಡರಿ, 4 ಸಿಕ್ಸರ್‌ಗಳು ಸೇರಿವೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲಿ 1 ವಿಕೆಟ್‌ಗೆ 177 ರನ್ ಸೇರಿಸಿ ಸೆಮಿಫೈನಲ್‌ಗೆ ಒಂದು ಕಾಲು ಇಟ್ಟು ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications