
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 3 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ರೋವ್ಮನ್ ಪೊವೆಲ್ ಅಬ್ಬರಿಸುವ ಮೂಲಕ ತಮ್ಮ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.
ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು 13 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತವನ್ನೇ ಕಲೆಹಾಕಿತು.
ಕ್ವಿಂಟನ್ ಡಿ ಕಾಕ್ ಶೂನ್ಯಕ್ಕೆ ಔಟಾದರೂ, ರೀಜಾ ಹೆಂಡ್ರಿಕ್ಸ್ 12 ಎಸೆತಗಳಲ್ಲಿ 21 ರನ್ ಗಳಿಸಿದರು. ರಿಲೀ ರೊಸ್ಸೊವ್ 10 ರನ್ ಗಳಿಸಿದರೆ, ನಾಯಕ ಐಡೆನ್ ಮಾರ್ಕ್ರಾಮ್ 14 ರನ್ ಗಳಿಸಿದರು. ಡೇವಿಡ್ ಮಿಲ್ಲರ್ ಅತ್ಯುತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾದರು. 22 ಎಸೆತಗಳಲ್ಲಿ 4 ಬೌಂಡರಿ ಮೂರು ಸಿಕ್ಸರ್ ಸಹಿತ 48 ರನ್ ಗಳಿಸಿದರು.
ನಂತರ ಬಂದ ಹೆನ್ರಿಚ್ ಕ್ಲಾಸೆನ್ 1 ರನ್ ಗಳಿಸಿ ಔಟಾದರೆ, ವೇಯ್ನ್ ಪಾರ್ನೆಲ್ 4 ರನ್ ಗಳಿಸಿ ಔಟಾದರು. ಸಿಸಾಂಡ ಮಗಾಲ 5 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್ ಸಹಿತ 18 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತ ಗಳಿಸಲು ಸಹಾಯ ಮಾಡಿದರು.
ಅಂತಿಮವಾಗಿ ದಕ್ಷಿಣ ಆಫ್ರಿಕಾ 13 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು. ಶೆಲ್ಡಾನ್ ಕಾಟ್ರೆಲ್, ಒಡಿಯಾನ್ ಸ್ಮಿತ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಅಕೀಲ್ ಹೊಸೆನ್, ಅಲ್ಜಾರಿ ಜೊಸೆಫ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

ರೋವ್ಮನ್ ಪೋವೆಲ್ ಅಬ್ಬರದ ಬ್ಯಾಟಿಂಗ್
ಸವಾಲಿನ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಸ್ಫೋಟಕ ಆರಂಭ ಪಡೆಯಿತು. ಕೈಲ್ ಮೇಯರ್ಸ್ 2 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರೆ, ಬ್ರಾಂಡನ್ ಕಿಂಗ್ 8 ಎಸೆತಗಳಲ್ಲಿ 2 ಬೌಂಡರಿ 2 ಸಿಕ್ಸರ್ ಸಹಿತ 23 ರನ್ ಗಳಿಸಿದರು. ಜೋನ್ಸನ್ ಚಾರ್ಲ್ಸ್ ಕೂಡ 14 ಎಸೆತಗಳಲ್ಲಿ 1 ಬೌಂಡರಿ ಮೂರು ಸಿಕ್ಸರ್ ಸಹಿತ 28 ರನ್ ಗಳಿಸಿ ಔಟಾದರು. ನಿಕೋಲಸ್ ಪೂರನ್ 7 ಎಸೆತಗಳಲ್ಲಿ 16 ರನ್ ಗಳಿಸಿದರು.
ನಂತರ ಬಂದ ರೋವ್ಮನ್ ಪೊವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಕೇವಲ 18 ಎಸೆತಗಳಲ್ಲಿ 1 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 43 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ರೊಮಾರಿಯೋ ಶೆಫರ್ಡ್ 3 ರನ್ ಗಳಿಸಿದರೆ, ಒಡಿಯನ್ ಸ್ಮಿತ್ 5 ರನ್ ಗಳಿಸಿ ಔಟಾದರು.
ಅಂತಿಮವಾಗಿ ವೆಸ್ಟ್ ಇಂಡೀಸ್ 10.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಗಳಿಸುವ ಮೂಲಕ 3 ವಿಕೆಟ್ ಜಯ ಸಾಧಿಸಿತು. ಸಿಸಾಂದ ಮಗಾಲ 2 ಓವರ್ ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದರು. ಜಾರ್ನ್ ಫೋರ್ಚುಯಿನ್, ತಬ್ರೈಜ್ ಶಮ್ಸಿ ಮತ್ತು ಅನ್ರಿಚ್ ನೋಕಿಯಾ ತಲಾ ಒಂದು ವಿಕೆಟ್ ಪಡೆದರು.

ಉಭಯ ತಂಡಗಳ ಆಡುವ ಬಳಗ
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಿಲೀ ರೊಸ್ಸೌ, ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ವೇಯ್ನ್ ಪಾರ್ನೆಲ್, ಸಿಸಂಡಾ ಮಗಾಲಾ, ಜಾರ್ನ್ ಫೋರ್ಚುಯಿನ್, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಅಕೆಲ್ ಹೊಸೈನ್, ಓಡಿಯನ್ ಸ್ಮಿತ್, ಶೆಲ್ಡನ್ ಕಾಟ್ರೆಲ್, ಅಲ್ಜಾರಿ ಜೋಸೆಫ್.