ಸೌರವ್ ಗಂಗೂಲಿ ಹುಟ್ಟುಹಬ್ಬ: ಗೆಳೆಯನ ಹುಟ್ಟುಹಬ್ಬದಲ್ಲಿ ಭಾಗಿಯಾದ ಸಚಿನ್ ತೆಂಡೂಲ್ಕರ್; ಚಿತ್ರಗಳು ವೈರಲ್

ಭಾರತ ಕ್ರಿಕೆಟ್ ಕಂಡ ಭಯರಹಿತ ಯಶಸ್ವಿ ನಾಯಕರಲ್ಲಿ ಓರ್ವರಾದ ಸೌರವ್ ಗಂಗೂಲಿ ಇಂದು ( ಜುಲೈ 8 ) 50 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಈ ದಿನಕ್ಕೂ ಮುನ್ನವೇ ಸೌರವ್ ಗಂಗೂಲಿ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಅವರ ಸ್ನೇಹಿತರು ಭರ್ಜರಿಯಾಗಿ ಆಚರಿಸಿದ್ದಾರೆ.
ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಕಾರಣ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಸೌರವ್ ಗಂಗೂಲಿ ಅಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹುಟ್ಟುಹಬ್ಬದ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಂಗೂಲಿ ಹುಟ್ಟುಹಬ್ಬದ ಆಚರಣೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಹಾಜರಿದ್ದರು.
ಸೌರವ್ ಗಂಗೂಲಿ ಹುಟ್ಟುಹಬ್ಬ ಆಚರಣೆಯ ಚಿತ್ರವನ್ನು ರಾಜೀವ್ ಶುಕ್ಲಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, 'ಗಂಗೂಲಿ ಅವರ ಐವತ್ತನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು, ಅವರಿಗೆ ಸುಖದ ಮತ್ತು ಆರೋಗ್ಯಕರ ಜೀವನ ಲಭಿಸಲಿ ಎಂದು ಆಶಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಗೆಳೆಯನ ಹುಟ್ಟುಹಬ್ಬಕ್ಕಾಗಿ ಇಂಗ್ಲೆಂಡ್‌ನಲ್ಲಿ ಸಚಿನ್ ಹಾಜರ್
ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸುತ್ತಿರುವ ಕಾರಣ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸದ್ಯ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿದ್ದು, ತನ್ನ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಲು ಸಚಿನ್ ತೆಂಡೂಲ್ಕರ್ ಕೂಡ ಇಂಗ್ಲೆಂಡ್‌ಗೆ ಹೋಗಿದ್ದಾರೆ. ಗಂಗೂಲಿ ಪಕ್ಕದಲ್ಲೇ ಕುಳಿತುಕೊಂಡು ಸಂತಸದಿಂದ ಮಾತನಾಡುತ್ತಿರುವ ಸಚಿನ್ ತೆಂಡೂಲ್ಕರ್ ಅವರ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇನ್ನು ಈ ಜೋಡಿ ಇದೇ ಇಂಗ್ಲೆಂಡ್ ನೆಲದಲ್ಲಿ 2007ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅಂತಿಮವಾಗಿ ಕಣಕ್ಕಿಳಿದಿತ್ತು. ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಜತೆಯಾಟವಾಡಿದ ಜೋಡಿ ಎನಿಸಿಕೊಂಡಿದೆ. ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಜೋಡಿ ಒಟ್ಟು 176 ಇನ್ನಿಂಗ್ಸ್‌ನಲ್ಲಿ 8227 ರನ್‌ಗಳ ಜತೆಯಾಟವನ್ನು ಆಡಿದೆ.

ಸೌರವ್ ಗಂಗೂಲಿ ಅಂಕಿ ಅಂಶ
ಒಟ್ಟು 113 ಟೆಸ್ಟ್ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ 7212 ರನ್ ಕಲೆಹಾಕಿದ್ದಾರೆ ಮತ್ತು 32 ವಿಕೆಟ್‍ಗಳನ್ನು ಪಡೆದಿದ್ದಾರೆ, 311 ಏಕದಿನ ಪಂದ್ಯಗಳನ್ನಾಡಿ 11363 ರನ್ ಬಾರಿಸಿದ್ದಾರೆ ಹಾಗೂ 100 ವಿಕೆಟ್ ಪಡೆದಿದ್ದಾರೆ.

ನಾಯಕನಾಗಿ ಗಂಗೂಲಿ
ಸೌರವ್ ಗಂಗೂಲಿ ಟೀಂ ಇಂಡಿಯಾದ ನಾಯಕನಾಗಿದ್ದಾಗ ತಂಡ ಹಲವು ಕನಸಿನ ಸರಣಿಗಳನ್ನು ಗೆದ್ದಿತ್ತು. ವಿದೇಶಿಗರನ್ನು ಅವರ ನೆಲದಲ್ಲಿಯೇ ಮಣಿಸುವ ಹಂತಕ್ಕೆ ಗಂಗೂಲಿ ತಮ್ಮ ತಂಡವನ್ನು ಕೊಂಡೊಯ್ದಿದ್ದರು. ನಾಯಕನಾಗಿ 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಫೈನಲ್ ಹಂತದವರೆಗೂ ಯಶಸ್ವಿಯಾಗಿ ಕೊಂಡೊಯ್ದಿದ್ದ ಸೌರವ್ ಗಂಗೂಲಿ ಒಟ್ಟಾರೆ 146 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 76 ಪಂದ್ಯಗಳಲ್ಲಿ ಗೆಲುವು ಹಾಗೂ 65 ಪಂದ್ಯಗಳಲ್ಲಿ ತಂಡ ಸೋತಿದೆ ಮತ್ತು ಉಳಿದ 5 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ. 49 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಸೌರವ್ ಗಂಗೂಲಿ 21 ಗೆಲುವು ಹಾಗೂ 13 ಸೋಲನ್ನು ಕಂಡಿದ್ದಾರೆ ಮತ್ತು 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications